ಫ್ಯಾಕ್ಟ್‌ಚೆಕ್: ಇತ್ತೀಚಿನ ರಾಜಸ್ಥಾನದ ಕೋಮುಗಲಭೆ ಎಂದು 6 ವರ್ಷದ ಹಳೆಯ ಪಂಜಾಬ್ ವಿಡಿಯೋ ವೈರಲ್

ರಾಜಸ್ಥಾನದ ಕರೌಲಿಯಲ್ಲಿ ಯುಗಾದಿ ಹಬ್ಬದ ಪ್ರಯುಕ್ತ (ಏಪ್ರಿಲ್ 2) ನಡೆದ ಶೋಭಾಯಾತ್ರೆಯ ವೇಳೆ ಎರಡು ಕೋಮುಗಳ ನಡುವೆ  ಘರ್ಷಣೆಯಲ್ಲಿ ಪರಸ್ಪರ ಕಲ್ಲು ತೂರಾಟ ನಡೆದು ಅಂಗಡಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ನವ ಸಂವತ್ಸರವನ್ನು ಆಚರಿಸುವ ಸಲುವಾಗಿ ಬೈಕ್ ರ್ಯಾಲಿಯನ್ನು ಮಾಡುವ ವೇಳೆ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮೆರವಣಗೆ ಹಾದುಹೋಗುವಾಗ ಈ ಘಟನೆ ನಡೆದಿದೆ. ಹಿಂಸಾಚಾರದ ವೇಳೆ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿವೆ.

ಘಟನೆಯ ನಂತರ ನಿಷೇದಾಜ್ಞೆಯನ್ನು ಉಲ್ಲಂಘಿಸಿದ 46 ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಹಿಂಸಾಚಾರಕ್ಕೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರವೇ ಹೊಣೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ.

ರಾಜಸ್ಥಾನದ ಕರೌಲಿಯಲ್ಲಿ ನಡೆದ ಈ ಘಟನೆಯ ಹಿನ್ನಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಕೇಸರಿ ಧ್ವಜ, ಕೋಲು, ಕತ್ತಿ, ಮತ್ತಿತರ ಆಯುಧಗಳನ್ನು ಹಿಡಿದ ಜನರ ಗುಂಪು ಪರಸ್ಪರ ರೋಷಾವೇಶದಿಂದ ಘರ್ಷಣೆಗಿಳಿಯುವ ಸಂದರ್ಭದಲ್ಲಿ ಪೊಲೀಸರು ಎರಡು ಕೋಮಿನವರನ್ನು ತಡೆಯುತ್ತಿರುವ ವಿಡಿಯೋವನ್ನು ಇದು ಹಿಂದೂ ಧರ್ಮದ ಹೊಸ ಸಂವತ್ಸರದ ಶೋಭಾ ಯಾತ್ರೆಯ ವಿಡಿಯೊ ಎಂದು ಹಂಚಿಕೊಳ್ಳುತ್ತಿದ್ದಾರೆ.

ಈ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.

ಇದು ನಿಜವೆ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರು ಸಿಖ್ ಪೇಟವನ್ನು ಧರಿಸಿರುವುದನ್ನು ಕಾಣುತ್ತದೆ. ಈ ವಿಡಿಯೋ ಪಂಜಾಬ್‌ ರಾಜ್ಯದ್ದಾಗಿರಬಹುದು ಎಂದು ಊಹಿಸಲಾಗಿತ್ತು. ಮತ್ತು ವಿಡಿಯೊದಲ್ಲಿ ನಿರೂಪಕನು ಹೇಳುವಂತೆ  ಈ ವೀಡಿಯೊ ಎಲ್ಲಿಂದ ಬಂದಿದೆ ಎಂದು ಖಚಿತವಾಗಿಲ್ಲ ಎಂದು ನಿರೂಪಕನು ಹೇಳಿರುವುದು ಗಮನಿಸಬಹುದಾಗಿದೆ.

ವೈರಲ್ ವೀಡಿಯೊದಲ್ಲಿ 0:08 ಸೆಕೆಂಡುಗಳ ಅವಧಿಯಲ್ಲಿ “ನಿಖಿಲ್ ಕಲೆಕ್ಷನ್” ಎಂದು ಬರೆದಿರುವ ಅಂಗಡಿಯ ಫಲಕವೊಂದು ಕಾಣುತ್ತದೆ. ಅದನ್ನೆ ಆಧಾರವಾಗಿಟ್ಟುಕೊಂಡು ಸರ್ಚ್ ಮಾಡಲಾಗಿದೆ.  Google ನಲ್ಲಿ “Nikhil Collection” ಎನ್ನುವ ಅಂಗಡಿಗಾಗಿ  ಮತ್ತಷ್ಟು ಶೋಧ ನಡೆಸಲು  JustDial ಸಹಾಯ ಪಡೆದುಕೊಂಡಾಗ ಅದೇ ಅಂಗಡಿಯನ್ನು ಹೋಲುವ  ಫೋಟೋಗಳು ಕಂಡುಬಂದವು.

ನಾಮ ಫಲಕದ ಪ್ರಕಾರ, ಅಂಗಡಿಯು ಪಂಜಾಬ್‌ನ ಫಗ್ವಾರಾ ಜಿಲ್ಲೆಯ ಗೌಶಾಲಾ ರಸ್ತೆಯಲ್ಲಿದೆ ಎಂಬ ಮಾಹಿತಿ ಲಭ್ಯವಾದವು. Google Maps ನ ಸಹಾಯದಿಂದ ಫಗ್ವಾರದ ಗೌಶಾಲಾ ರಸ್ತೆಯಲ್ಲಿರುವ “ನಿಖಿಲ್ ಕಲೆಕ್ಷನ್” ಅಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಯಿತು.

ನಂತರ ಈ ಪ್ರದೇಶದಲ್ಲಿ ನಡೆದ ಕೋಮು ಘರ್ಷಣೆಗಳ ಕುರಿತು ಗೂಗಲ್ ಕೀವರ್ಡ್ ಸರ್ಚ್ ನಡಿಸಿದಾಗ  ಜುಲೈ 2016 ರಿಂದ ಅನೇಕ  ವರದಿಗಳನ್ನು ಕಂಡುಬಂದವು. ಈ ವರದಿಗಳ ಪ್ರಕಾರ, ವೈರಲ್  ವೀಡಿಯೊ ಜುಲೈ 22, 2016ರಲ್ಲಿ ಶಿವಸೇನಾ ಕಾರ್ಯಕರ್ತರು ಮತ್ತು  ಮುಸ್ಲಿಂ ಗುಂಪಿನ ನಡುವೆ ನಡೆದ ಘಟನೆಯದ್ದಾಗಿದೆ ಈ ವೇಳೆ ಗೌಶಾಲಾದಲ್ಲಿ ಸಿಖ್ಖರು ಮುಸ್ಲಿಂ ಸಮುದಾಯದವರ ಬೆಂಬಲವಾಗಿ ನಿಂತರು ಎಂದು ವರದಿಯಾಗಿದೆ.

ಜುಲೈ 22, 2016 ರಂದು ಪಂಜಾಬ್‌ನಲ್ಲಿ ಈ ಘಟನೆ ನಡೆಯುವ ಎರಡು ದಿನಗಳ ಮೊದಲು, ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆಗೆ ಅಡ್ಡಿಪಡಿಸಿದ್ದನ್ನು ವಿರೋಧಿಸಿ ಪ್ರತಿಭಟಿಸಿದ ಶಿವಸೇನಾ  ಕಾರ್ಯಕರ್ತರು ಮುಸ್ಲಿಮರಿಗೆ ಸೇರಿದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಮುಂದಾದಾಗ ಈ ಘಟನೆ ನಡೆದಿದೆ.

ಘಟನೆಯ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು ಅದರಲ್ಲಿ ವೈರಲ್ ವಿಡಿಯೊದಲ್ಲಿರುವ ಫೋಟೋಗಳನ್ನು ಹೊಂದಿದೆ. ಘಟನೆಗೆ ಸಂಬಂಧಿಸಿದಂತೆ ಇದೇ ರೀತಿಯ ವೀಡಿಯೊಗಳನ್ನು ಜುಲೈ 2016 ರಲ್ಲಿ ಇತರ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಸುಮಾರು ಆರು ವರ್ಷಗಳಷ್ಟು ಹಳೆಯದಾಗಿದ್ದು ಪಂಜಾಬ್‌ನಲ್ಲಿ ನಡೆದ ಘಟನೆಯದ್ದು, ಹಾಗೂ ರಾಜಸ್ಥಾನದ ಕರೌಲಿಯಲ್ಲಿ ನವ ಸಂವತ್ಸರದ ದಿನ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ಕೃಪೆ: ಇಂಡಿಯಾ ಟುಡೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಯುವತಿಯನ್ನು ಕೊಂದು ಸೂಟ್ ಕೇಸ್‌ನಲ್ಲಿ ತುಂಬಿದ ಭಗ್ನ ಪ್ರೇಮಿ ಪ್ರಕರಣ ಲವ್ ಜಿಹಾದ್ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights