FACT CHECK | ಮಸೀದಿಗಳಿಗೆ ಹೋಲಿಸಿದರೆ ದೇವಸ್ಥಾನಗಳಿಗೆ ಹೆಚ್ಚಿನ ವಿದ್ಯುತ್ ಶುಲ್ಕ ವಿಧಿಸಲಾಗುತ್ತಿದೆಯೇ?

ಕರ್ನಾಟಕ ಸರ್ಕಾರ ತಂದಿರುವ ಗೃಹ ಜ್ಯೋತಿ ಯೋಜನೆ ಅನುಷ್ಠಾನ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯುತ್ ದರಗಳಿಗೆ ಸಂಬಂಧಿಸಿದ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ರಾಜ್ಯದ ನಾಗರಿಕರು ಬಳಸುತ್ತಿರುವ ವಿದ್ಯುತ್‌ ಬಳಕೆಯ ಪ್ರತಿ ಯೂನಿಟ್ ದರ, ಹಾಗೂ ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳಿಗೆ ನಿಗದಿ ಮಾಡಿರುವ ದರಗಳ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಈ ಫೋಸ್ಟ್‌ನಲ್ಲಿ ಮಾಡಲಾದ ಆರೋಪವೇನೆಂದರೆ ರಾಜ್ಯದ ನಾಗರಿಕರು ಬಳಕೆ ಮಾಡುವ ವಿದ್ಯುತ್‌ನ ಪ್ರತಿ ಯೂನಿಟ್‌ಗೆ ರೂ 7.85 ಯನ್ನು ಪಾವತಿಸಬೇಕು. ದೇವಸ್ಥಾನಕ್ಕೂ ಇದೇ ದರವನ್ನು ಅಂದರೆ ರೂ 7.85 ನಿಗದಿ ಪಡಿಸಲಾಗಿದೆ. ಆದರೆ ಸಿದ್ದರಾಮಯ್ಯ ಸರ್ಕಾರ ಮಸೀದಿ ಮತ್ತು ಚರ್ಚ್‌ನಲ್ಲಿ ಬಳಕೆ ಮಾಡಲಾಗುವ ವಿದ್ಯುತ್‌ನ ದರ ಪ್ರತಿ ಯೂನಿಟ್‌ಗೆ ಕೇವಲ ರೂ 1.85 ಅನ್ನು ನಿಗದಿ ಪಡಿಸಿದೆ ಎಂದು ಆರೋಪಿಸಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಬಹುಸಂಖ್ಯಾತರಿಗೆ ಹೊರೆಯನ್ನು ಹೆಚ್ಚಿಸಿದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದು ನಮ್ಮ ಜಾತ್ಯತೀತ ಭಾರತ. ಬುಲ್ಡೋಜರ್ ಚಲಿಸಿದಾಗ ಸುಪ್ರೀಂ ಕೋರ್ಟ್ ವಿಫಲವಾಯಿತು. ಹಿಜಾಬ್ ಧರಿಸಬೇಡಿ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ ನಂತರ ಕುರಾನ್ ನೆನಪಾಯಿತು. ಮಸೀದಿ ಖಾಸಗಿ ಆಸ್ತಿಯಾಗಿದ್ದರೆ, ಸರ್ಕಾರವು ಧರ್ಮಗುರುಗಳಿಗೆ ಏಕೆ ಸಂಬಳ ನೀಡುತ್ತದೆ? ದೇವಸ್ಥಾನ ಸರ್ಕಾರಿ ಆಸ್ತಿಯಾಗಿದ್ದರೆ ಅರ್ಚಕರಿಗೆ ಸರ್ಕಾರಿ ಸಂಬಳ ಏಕೆ ಸಿಗುವುದಿಲ್ಲ? ಈ ಸರಪಳಿಯನ್ನು ಮುರಿಯಬೇಡಿ. ನೀವು ಒಪ್ಪಿದರೆ, ನೀವು ಮುಂದುವರಿಯಬಹುದು.

ಪ್ರತಿಯೊಬ್ಬ ಹಿಂದೂ ಸಹೋದರ ಮತ್ತು ಸಹೋದರಿಯರಿಗೆ ಈ ಸಂದೇಶವನ್ನು ವಾಟ್ಸಾಪ್ ಮಾಡಿ ಇದರಿಂದ ಪ್ರತಿಯೊಬ್ಬ ಹಿಂದೂ ಸಹೋದರ ಮತ್ತು ಸಹೋದರಿಯು ಅವರ ಡಬಲ್ ನೀತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಲಿಂಕ್ ಅನ್ನು ಸೇರಿಸಲು ನಿಮ್ಮ 5 ಹಿಂದೂ ಸಹೋದರ ಸಹೋದರಿಯರಿಗೆ ಕಳುಹಿಸಿ. ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ನಿಜವಾಗಿಯೂ ಪೋಸ್ಟ್‌ನಲ್ಲಿ ನಮೂದಿಸಲಾಗಿರುವಂತೆ ವಿದ್ಯುತ್ ದರ ಪಟ್ಟಿಗಳಲ್ಲಿ ತಾರತಮ್ಯ ಎಸಗಲಾಗಿದೆಯೇ? ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಎಸ್ಕಾಂಗಳು ಇತ್ತೀಚೆಗೆ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಿದ ಪಟ್ಟಿಯ ಮಾಹಿತಿಯನ್ನು ಪಡೆದು ಪರಿಶೀಲಿಸಿದಾಗ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಮಾಹಿತಿ ತಪ್ಪಾಗಿದೆ ಎಂದು ತಿಳಿದು ಬಂದಿದೆ.

ಕರ್ನಾಟಕದಲ್ಲಿ ಬೆಸ್ಕಾಂ, ಮಂಗಳೂರು ವಿದ್ಯುತ್ ಸರಬರಾಜು ನಿಗಮ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ, (ಹೆಸ್ಕಾಂ), ಗುಲ್ಬರ್ಗ ವಿದ್ಯುತ್ ಸರಬರಾಜು ನಿಗಮ (ಜೆಸ್ಕಾಂ), ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ದಂತಹ ವಿಭಾಗಗಳಿವೆ.

ಹೊಸ ಉಷ್ಣ ವಿದ್ಯುತ್ ಕೇಂದ್ರಗಳಿಂದ ಖರೀದಿಸುವ ನವೀಕರಿಸಬಹುದಾದ ಇಂಧನಗಳ ಬೆಲೆ ಏರಿಕೆಯಾಗಿದೆ. ನೌಕರರ ವೇತನ ಪರಿಷ್ಕರಣೆಯಾಗಿದೆ, ನಿರ್ವಹಣಾ ವೆಚ್ಚದಲ್ಲಿ ಏರಿಕೆಯಾಗಿದೆ. ಆದ್ದರಿಂದ, ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿತ್ತು ಎಂದು ಕೆಇಆರ್‌ಸಿ ವಿದ್ಯುತ್ ದರ ಹೆಚ್ಚವನ್ನು ಸಮರ್ಥಿಸಿಕೊಂಡಿತ್ತು. ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ವಿದ್ಯುತ್‌ ದರ ಹೆಚ್ಚಿಸಿದ್ದು ಏಪ್ರಿಲ್ 1, 2023 ರಿಂದ ಜಾರಿಗೆ ಬಂದಿದೆ.

ನಗರ, ಗ್ರಾಮೀಣ ಒಂದೇ ವಿಭಾಗಕ್ಕೆ‌ ದರ ನಿಗದಿಪಡಿಸುವುದನ್ನು ಸರಳಗೊಳಿಸುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಒಂದೇ ವಿಭಾಗದಲ್ಲಿ ವಿಲೀನಗೊಳಿಸಲಾಗಿದೆ. ಆದರೆ, ಗ್ರಾಮೀಣ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 30 ಪೈಸೆ ರಿಯಾಯತಿ ನೀಡಲು ಆಯೋಗ ಅನುಮತಿ ನೀಡಿದೆ.

ವಿದ್ಯುತ್‌ ದರ ಹೆಚ್ಚಳ ಪಟ್ಟಿ

ಎಸ್ಕಾಂ ಎಫ್‌ಪಿಪಿಸಿಎ ಶುಲ್ಕ (ಜುಲೈ-ಸೆಪ್ಟೆಂಬರ್‌) ಎಫ್‌ಪಿಪಿಸಿಎ ಶುಲ್ಕ (ಅಕ್ಟೋಬರ್‌-ಡಿಸೆಂಬರ್‌)
ಬೆಸ್ಕಾಂ 51 ಪೈಸೆ 50 ಪೈಸೆ
ಬೆಸ್ಕಾಂ 47 ಪೈಸೆ 46 ಪೈಸೆ
ಸೆಸ್ಕಾಂ 41 ಪೈಸೆ 41 ಪೈಸೆ
ಹೆಸ್ಕಾಂ 50 ಪೈಸೆ 50 ಪೈಸೆ
ಜೆಸ್ಕಾಂ 34 ಪೈಸೆ 33 ಪೈಸೆ

ಎಸ್ಕಾಂ ವಾರು ಶುಲ್ಕ ಹೆಚ್ಚಳ:

ಕೆಇಆರ್‌ಸಿಯು 2023ರ ಮಾ.13 ರಂದು ಅನುಮೋದನೆ ನೀಡಿರುವ ಪ್ರಕಾರ ಏಪ್ರಿಲ್‌ 2023ರಿಂದ ಜೂನ್‌ 2023ರವರೆಗೆ ಮೂರು ತಿಂಗಳವರೆಗೆ ಬೆಂಗಳೂರು ವಿದ್ಯುತ್‌ ಸರಬರಾಜು ನಿಗಮ (ಬೆಸ್ಕಾಂ) 101 ಪೈಸೆ, ಮಂಗಳೂರಿನ ಮೆಸ್ಕಾಂ 93 ಪೈಸೆ, ಮೈಸೂರಿನ ಸೆಸ್ಕಾಂ 82 ಪೈಸೆ, ಹುಬ್ಬಳ್ಳಿಯ ಹೆಸ್ಕಾಂ 100 ಪೈಸೆ, ಕಲಬುರಗಿಯ ಜೆಸ್ಕಾಂ 67 ಪೈಸೆಯಷ್ಟುದರ ಹೆಚ್ಚಳ ಮಾಡಲು ನಿರ್ಧರಿಸಿತ್ತು.

ಈ ಹೊರೆಯನ್ನು ಆರು ತಿಂಗಳಿಗೆ ಹಂಚಿರುವುದರಿಂದ ಏಪ್ರಿಲ್‌ 1ರಿಂದ ಜೂನ್‌ 30ರವರೆಗೆ ಸಂಗ್ರಹಿಸುವ ಬದಲು ಜುಲೈ 1, 2023ರಿಂದ ಡಿಸೆಂಬರ್‌ 31ರವರೆಗೆ ವಸೂಲಿ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ಜುಲೈನಿಂದ ಸೆಪ್ಟೆಂಬರ್‌ವರೆಗೆ ಬೆಸ್ಕಾಂ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 51 ಪೈಸೆ, ಜೆಸ್ಕಾಂ 47 ಪೈಸೆ, ಸೆಸ್‌್ಕ 41 ಪೈಸೆ, ಹೆಸ್ಕಾಂ 50 ಪೈಸೆ, ಜೆಸ್ಕಾಂ 34 ಪೈಸೆಯಷ್ಟುಶುಲ್ಕ ಹೆಚ್ಚಳ ಮಾಡಲಾಗಿದೆ. ಬಳಿಕ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಬೆಸ್ಕಾಂ 50 ಪೈಸೆ, ಮೆಸ್ಕಾಂ 46 ಪೈಸೆ, ಸೆಸ್‌ 41 ಪೈಸೆ, ಹೆಸ್ಕಾಂ 50 ಪೈಸೆ, ಜೆಸ್ಕಾಂ ಗ್ರಾಹಕರಿಗೆ 33 ಪೈಸೆಯಷ್ಟುಶುಲ್ಕ ಹೆಚ್ಚಳ ಮಾಡಿದೆ.

ಇಲ್ಲಿ ವಿದ್ಯುತ್ ಬಳಕೆಯ ಪ್ರಮಾಣವನ್ನು ಎರಡು ವಿಭಾಗಗಳನ್ನಾಗಿ ಮಾಡಲಾಗಿದೆ.
1) Low tension supply
2) High tension supply

ಧಾರ್ಮಿಕ ಸಂಸ್ಥೆಗಳು LT-2(a) ಸುಂಕಗಳು ಎಂಬ ಉಪವರ್ಗದ ಅಡಿಯಲ್ಲಿ ಬರುತ್ತವೆ.

ಕೈಮಗ್ಗ, ಕನ್ಸಲ್ಟೆನ್ಸಿ, ಟೈಲರಿಂಗ್, ಹೋಮ್/ಸ್ಟೇ ಅಥವಾ ಪೇಯಿಂಗ್ ಗೆಸ್ಟ್‌ಗಳಂತಹ ಚಿಕ್ಕ ಪ್ರಮಾಣದ ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ದರವನ್ನು ನಿಗದಿಪಡಿಸಲಾಗುತ್ತದೆ.

ಇವುಗಳಲ್ಲದೆ ಆಸ್ಪತ್ರೆಗಳು, ಔಷಧಾಲಯಗಳು, ಅಗ್ನಿಶಾಮಕ ಕೇಂದ್ರಗಳು, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಆರೋಗ್ಯ ಕೇಂದ್ರಗಳು, ವೇರ್ ಹೌಸ್, ಪುನರ್ವಸತಿ ಕೇಂದ್ರಗಳಂತಹ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ.

“ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು, ಗುರುದ್ವಾರಗಳು, ಆಶ್ರಮಗಳು, ಮಠಗಳು ಮತ್ತು ಧಾರ್ಮಿಕ/ದತ್ತಿ ಸಂಸ್ಥೆಗಳಿಗೂ ಇದೇ   ಅನ್ವಯವಾಗುತ್ತದೆ” ಎಂದು ಬೆಸ್ಕಾಂನ ಸುಂಕದ ಆದೇಶದಲ್ಲಿ ಉಲ್ಲೇಖಿಸಿದೆ.

BESCOM ನ ಸುಂಕದ ಆದೇಶಗಳನ್ನು ಕೆಳಗೆ ಕಾಣಬಹುದು. ಸುಂಕಗಳು 50 KW ವರೆಗೆ ₹110 ಮತ್ತು ಪ್ರತಿ ಹೆಚ್ಚುವರಿ KW ಗೆ ₹210. ಪ್ರತಿ KWh ಗೆ (ಗಂಟೆಗೆ ಕಿಲೋ-ವ್ಯಾಟ್)  ದರಗಳು ₹4.75  ಮತ್ತು ಬಳಕೆ ಮಿತಿ 100 ಯೂನಿಟ್‌ಗಳನ್ನು ಮೀರಿದರೆ ಎಲ್ಲಾ ಘಟಕಗಳಿಗೆ ₹7 ದರ ವಿಧಿಸಲಾಗುತ್ತದೆ. ಇದು ದೇವಸ್ಥಾನ, ಮಸೀದಿ ಮತ್ತು ಚರ್ಚ್‌ ಎಲ್ಲಕ್ಕೂ ಅನ್ವಯವಾಗುತ್ತದೆ.

ಮೇಲಿನ ದರಗಳು ಕೇಲವ ಧಾರ್ಮಿಕ ಸಂಸ್ಥೆಗಳಿಗೆ ನಿಗದಿಪಡಿಸಲಾಗಿದೆ. ಒಂದು ವೇಳೆ ಈ ಸಂಸ್ಥೆಗಳು ವಾಣಿಜ್ಯ ಮಳಿಗೆಗಳನ್ನು ನಡೆಸುತ್ತಿದ್ದರೆ, ಉದಾ: ಸಮುದಾಯ ಭವನ, ಮದುವೆ ಛತ್ರ, ಅತಿಥಿ ಗೃಹ ಇಂತಹ ಇತರೆ ಉದ್ದೇಶಗಳ ವಾಣಿಜ್ಯ ಕಟ್ಟಡಗಳನ್ನು ಬಳಸುತ್ತಿದ್ದರೆ, ಆಗ ವಿಧಿಸುವ ವಿದ್ಯತ್ ದರಗಳು High tension supply ವ್ಯಾಪ್ತಿಯಲ್ಲಿ ಬರುತ್ತವೆ.

ಧಾರ್ಮಿಕ ಸಂಸ್ಥೆಗಳು HT-4 ಸುಂಕಗಳು ಎಂಬ ಉಪವರ್ಗದ ಅಡಿಯಲ್ಲಿ ಬರುವ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದರೆ

ಇದು ಹೈ-ಪವರ್ ಟ್ರಾನ್ಸ್‌ಮಿಷನ್ ಲೈನ್‌ಗಳನ್ನು ನೇರವಾಗಿ ಟ್ಯಾಪ್ ಮಾಡುವ ಅಥವಾ ಸ್ವತಂತ್ರವಾಗಿ ಸರಬರಾಜು ಮಾಡುವ ಕಟ್ಟಡಗಳಿಗೆ ನೀಡಲಾಗುವ ಸುಂಕವಾಗಿದೆ. ಥಿಯೇಟರ್‌ಗಳು, ಶಾಪಿಂಗ್ ಸೌಲಭ್ಯಗಳು, ಕ್ಲಬ್‌ಗಳು, ಆಸ್ಪತ್ರೆಗಳು, ಅತಿಥಿ ಗೃಹಗಳು, ಅಂಗಳ/ಬೀದಿ ದೀಪಗಳು ಮತ್ತು ಕ್ಯಾಂಟೀನ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲು ಸಹ ಇದನ್ನು ಬಳಸಬಹುದು.

ಆದರೆ ಯಾವುದೇ  ಧಾರ್ಮಿಕ ಸಂಸ್ಥೆಗಳನ್ನು (ದೇವಸ್ಥಾನ, ಚರ್ಚ್ ಮತ್ತು ಮಸೀದಿ) ಧರ್ಮದ ಆಧಾರದಲ್ಲಿ ಅಳೆಯದೇ ಒಂದೇ ರೀತಿಯ  ವರ್ಗೀಕರಣನ್ನು ಮಾಡಲಾಗಿದೆ. ಯಾವ ವರ್ಗದಲ್ಲಿ ಬರುತ್ತದೆ ಎಂಬ ಆಧಾರದ ಮೇಲೆ ದರ ನಿಗದಿ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ತಾರತಮ್ಯ ನಡೆಯುವುದಿಲ್ಲ ಎಂದು ಹೇಳಿದೆ. ಇದನ್ನು ಕೆಳಗೆ ನೀಡಿರುವ ಪಟ್ಟಿಯಲ್ಲಿ ನೋಡಬಹುದು

“ದೇವಾಲಯಗಳು, ಚರ್ಚ್‌ಗಳು, ಮಸೀದಿಗಳು, ಗುರುದ್ವಾರಗಳು, ಆಶ್ರಮಗಳು, ಮಠಗಳು ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಎಚ್‌ಟಿ ಪೂರೈಕೆಯ ಅಡಿಯಲ್ಲಿ, ಧಾರ್ಮಿಕ / ದತ್ತಿ ಸಂಸ್ಥೆಗಳನ್ನು ಎಚ್‌ಟಿ-4 ಸುಂಕದ ವೇಳಾಪಟ್ಟಿಯ ಅಡಿಯಲ್ಲಿ ವರ್ಗೀಕರಿಸಿ ದರ ನಿಗದಿ ಮಾಡಲಾಗುತ್ತದೆ.

ಈ ಸಂಸ್ಥೆಗಳು ಕಲ್ಯಾಣ ಮಂಟಪಗಳಿಗೆ ವಿದ್ಯುತ್ ಬಳಸಿದರೆ / ಮದುವೆ ಸಭಾಂಗಣ, ರೆಸ್ಟೋರೆಂಟ್ ಅಥವಾ ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸದ ಯಾವುದೇ ಇತರ ವಾಣಿಜ್ಯ ಚಟುವಟಿಕೆಗಳಿಗೆ, ಅಂತಹ ಶಕ್ತಿಯ ಬಳಕೆಯನ್ನು HT-2(b) ಸುಂಕದ ವೇಳಾಪಟ್ಟಿಯ ಅಡಿಯಲ್ಲಿ ಬಿಲ್ ಪಾವತಿ ಮಾಡಬೇಕಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಸಾಮಾನ್ಯ ನಾಗರಿಕರಿಗೆ ಮತ್ತು ಹಿಂದೂಗಳ ದೇವಸ್ಥಾನಗಳಿಗೆ ಮಾತ್ರ ಹೆಚ್ಚಿದ ವಿದ್ಯುತ್ ದರವನ್ನು ವಿಧಿಸಿ, ಮಸೀದಿ ಮತ್ತು ಚರ್ಚುಗಳಿಗೆ ಅತೀ ಕಡಿಮೆ ದರವನ್ನು ನಿಗದಿಪಡಿಸಲಾಗಿದೆ ಎಂಬ ವಾದ ಸುಳ್ಳು.

ಬೆಸ್ಕಾಂ ನೀಡಿರುವ ಪಟ್ಟಿಯ ಪ್ರಕಾರ ಎಲ್ಲ ಧಾರ್ಮಿಕ ಸಂಸ್ಥೆಗಳಿಗೂ ಒಂದೇ ತೆರನಾದ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೂ ಕೆಲವು ಬಲಪಂಥೀಯ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ಕರ್ನಾಟಕ ಸರ್ಕಾರ ಹಿಂದೂ ವಿರೋಧಿಯಾಗಿದೆ, ಅಲ್ಪಸಂಖ್ಯಾತರ ಪರವಾಗಿ ಮಾತ್ರ ಕೆಲಸ ಮಾಡುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವ ಮೂಲಕ ಅಪಪ್ರಚಾರ ಮಾಡುತ್ತಾ ಈ ರೀತಿ ಸುಳ್ಳು ಪೋಸ್ಟ್‌ ಹಂಚಿಕೊಳ್ಳುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights