FACT CHECK | ರೇಷನ್ ಕಾರ್ಡ್‌ನಲ್ಲಿ ಹೆಸರು ತಪ್ಪಾಗಿ ಮುದ್ರಿಸಿದಕ್ಕೆ ಅಧಿಕಾರಿಗಳ ಬಳಿ ನಾಯಿಯಂತೆ ‘ಬೌ ಬೌ’ ಎಂದು ಬೊಗಳಿದ ಘಟನೆ ಇತ್ತೀಚಿನದಲ್ಲ

ಪಡಿತರ ಚೀಟಿಯಲ್ಲಿ ವ್ಯಕ್ತಿಯೊಬ್ಬರ ಹೆಸರನ್ನು ‘ದತ್ತಾ’  ಬದಲು ಕುತ್ತಾ ಎಂದು ತಪ್ಪಾಗಿ ಮುದ್ರಿಸಿದ್ದರಿಂದ ಅಸಮಾಧಾನಗೊಂಡ ವ್ಯಕ್ತಿಯೊಬ್ಬರು, ಸರ್ಕಾರಿ ಅಧಿಕಾರಿಗಳ ಮುಂದೆ ‘ಬೌ ಬೌ’ ಎಂದು ನಾಯಿಯಂತೆ ಬೊಗಳಿದ ಘಟನೆ ಇತ್ತೀಚೆಗೆ ನಡೆದಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಪಡಿತರ ಚೀಟಿಯಲ್ಲಿ ದತ್ತಾ ಎಂಬ ಉಪನಾಮದ ಬದಲಿಗೆ ‘ಕುತ್ತಾ’ (ನಾಯಿ) ಎಂದು ಬರೆದಾಗ ವ್ಯಕ್ತಿಯು ಈ ರೀತಿಯ ಪ್ರತಿಭಟನೆಯ ವಿಧಾನವನ್ನು ಅಳವಡಿಸಿಕೊಂಡಿದ್ದಾನೆ ಎಂದು ಹಂಚಿಕೊಳ್ಳಲಾಗುತ್ತಿದೆ. ಪೇಪರ್ ಹಿಡಿದುಕೊಂಡು ವಾಹನ ನಿಲ್ಲಿಸುತ್ತಿರುವ ದೃಶ್ಯವನ್ನು ಇಲ್ಲಿ ನೋಡಬಹುದು. ಈ ವಿಡಿಯೋವನ್ನು ಇತ್ತೀಚಿನದು ಎಂದು ಹೇಳಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್ ಬಳಕೆದಾರ ‘ಇಶ್ವಿಂದರ್ ಸಿಂಗ್ ಕಾಲ್’ ಈ ವಿಡಿಯೋವನ್ನು 2025ರ ಜನವರಿ 8ರಂದು ಹಂಚಿಕೊಂಡಿದ್ದು (ಆರ್ಕೈವ್ ಲಿಂಕ್ ) “ಪಡಿತರ ಚೀಟಿಯಲ್ಲಿನ ಉಪನಾಮವನ್ನು ದತ್ತಾ ಬದಲಿಗೆ ಕುತ್ತಾ ಎಂದು ತಪ್ಪಾಗಿ ಬರೆದಿದ್ದರಿಂದ ನೊಂದ ದತ್ತಾ ಸಾಹೇಬರು ಅಧಿಕಾರಿಯ ಎದುರು ನಾಯಿಯ ರೀತಿ ಬೊಗಳುತ್ತಾ ಪ್ರತಿಭಟಿಸಿದ್ದಾರೆ” ಎಂದು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

‌ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನುಪರಿಶೀಲಿಸಲು ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ, ಸುದ್ದಿ ವೆಬ್‌ಸೈಟ್‌ಗಳಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದ ವರದಿಗಳು ಲಭ್ಯವಾಗಿದೆ.  “ನಾನು ರೇಷನ್ ಕಾರ್ಡ್‌ನಲ್ಲಿನ ಹೆಸರು ಸರಿಪಡಿಸಲು ಮೂರು ಬಾರಿ ಅರ್ಜಿ ಸಲ್ಲಿಸಿದ್ದೆ. ಮೂರನೇ ಬಾರಿ ನನ್ನ ಹೆಸರನ್ನು “ಶ್ರೀಕಾಂತಿ ದತ್ತಾ” ಬದಲಾಗಿ “ಶ್ರೀಕಾಂತಿ ಕುತ್ತಾ” ಎಂದು ಬರೆಯಲಾಗಿದೆ. ಇದರಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ” ಎಂದು ಸಂತ್ರಸ್ತ ವ್ಯಕ್ತಿ ಆಕ್ರೋಶ ಹೊರಹಾಕಿರುವುದನ್ನು ANI  ವರದಿ ಮಾಡಿವೆ.

ಈ ಘಟನೆಯು 2022ರ ನವೆಂಬರ್‌ ತಿಂಗಳಿನದ್ದಾಗಿದ್ದು, ಪಶ್ಚಿಮ ಬಂಗಾಳದ ಬಂಕುರ ಜಿಲ್ಲೆಯಲ್ಲಿ ನಡೆದಿತ್ತು.  ಶ್ರೀಕಾಂತ್ ದತ್ತಾ ಎಂಬವರ ಪಡಿತರ ಚೀಟಿಯಲ್ಲಿ  ‘ದತ್ತಾ’  ಎಂಬ ಹೆಸರು  ‘ಕುತ್ತಾ'(ನಾಯಿ) ಎಂದು ಮುದ್ರಣವಾಗಿತ್ತು. ಹಲವು ಬಾರಿ ತಿದ್ದುಪಡಿಗೆ ಪ್ರಯತ್ನಿಸಿದರೂ ಏನು ಪ್ರಯೋಜನ ಆಗದಿದ್ದಾಗ ಸ್ಥಳೀಯ ಬ್ಲಾಕ್‌ ಡೆವಲಪ್‌ಮೆಂಟ್ ಆಫೀಸರ್‌ (ಬಿಡಿಒ) ಎದುರು ನಾಯಿಯಂತೆ ಬೊಗಳಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಈಗ ಅದೇ ವಿಡಿಯೋ ಇತ್ತೀಚಿಗೆ ನಡೆದ ಘಟನೆ ಎಂದು ಸಾಮಾಜಿಕ ಮಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

“ನಿನ್ನೆ ನಾನು ತಿದ್ದುಪಡಿಗೆಂದು ಮತ್ತೆ ಅರ್ಜಿ ಸಲ್ಲಿಸಲು ಹೋಗಿದ್ದೆ. ಅಲ್ಲಿ ಜಂಟಿ ಬಿಡಿಒ ಅವರನ್ನು ನೋಡಿದೆ. ಅದಕ್ಕೆ ಅವರ ಮುಂದೆ ನಾಯಿಯಂತೆ ವರ್ತಿಸಲು ಆರಂಭಿಸಿದೆ. ಆದರೆ ಅವರು ನನ್ನ ಅಹವಾಲಿಗೆ ಸ್ಪಂದಿಸದೆ ಅಲ್ಲಿಂದ ಪಲಾಯನ ಮಾಡಿದರು. ನನ್ನಂತಹ ಸಾಮಾನ್ಯ ಜನರು ಕೆಲಸ ಬಿಟ್ಟು, ತಿದ್ದುಪಡಿಗೆಂದು ಎಷ್ಟು ಬಾರಿ ಅಲೆದಾಡಲು ಸಾಧ್ಯ?” ಎಂದು ಅವರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದರು. ಈ ಬಗ್ಗೆ ಟೈಮ್ಸ್‌ನೌ ಕೂಡ ವರದಿ ಮಾಡಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಪಡಿತರ ಚೀಟಿಯಲ್ಲಿ ತನ್ನ ಹೆಸರನ್ನು ತಪ್ಪಾಗಿ ನಮೂದಿಸಿರುವುದನ್ನು ವಿರೋಧಿಸಿ ವ್ಯಕ್ತಿಯೊಬ್ಬರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಇತ್ತೀಚಿನದ್ದಲ್ಲ. ಈ ಘಟನೆಯು 2022ರಲ್ಲಿ ನಡೆದಿದ್ದು, ವ್ಯಕ್ತಿಯ ಪಡಿತರ ಚೀಟಿಯಲ್ಲಿ ‘ದತ್ತ’ ಎಂಬ ಉಪನಾಮದ ಬದಲಿಗೆ ‘ಕುತ್ತಾ’ ಎಂದು ಮುದ್ರಿಸಲಾಗಿತ್ತು. ಈ ತಪ್ಪನ್ನು ಸರಿಪಡಿಸಿಕೊಳ್ಳಲು ಹಲವು ಬಾರಿ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ ಯಾವುದೇ ಪ್ರಯೋಜನ ಕಾಣದಿದ್ದಾಗ ನಾಯಿಯಂತೆ ಬೊಗಳಿ ಪ್ರತಿಭಟನೆ ನಡೆಸಿದ್ದರು. ಈಗ ಅದೇ ವಿಡಿಯೋ  ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕರ್ನಾಟಕ ಲಾಕ್‌ಡೌನ್ ಆಗಲಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights