FACT CHECK | ಮುಸ್ಲಿಂ ದಂಪತಿಗಳ ನಡುವಿನ ಜಗಳವನ್ನು ‘ಲವ್ ಜಿಹಾದ್’ ಎಂಬ ಕೋಮು ಹಿನ್ನಲೆಯಲ್ಲಿ ತಪ್ಪಾಗಿ ಹಂಚಿಕೆ

ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅಮಾನುಶವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಮತ್ತೊಂದು ಮಹಿಳೆ ಕೂಡ ಇದ್ದು ಆಕೆ ಹೊಡೆಯುವುದನ್ನು ತಡೆಯುತ್ತಿರುವುದು ಕಾಣಬಹುದು. ಮಹಿಳೆ ಹಿಂದೂ ಮತ್ತು ಆಕೆಯ ಮೇಲೆ ಹಲ್ಲೆ ನಡೆಸುತ್ತಿರುವ ಪುರುಷ ಆಕೆಯ ಮುಸ್ಲಿಂ ಪತಿ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಪೋಸ್ಟ್‌ ಮಾಡುತ್ತಾ, ‘‘ಅಬ್ದುಲ್ಲನ ಮದುವೆಯಾದ ಹಿಂದೂ ಹುಡುಗಿಯ ಪರಿಸ್ಥಿತಿ. ಹಿಂದೂ ಹುಡುಗರು ಮದುವೆಯಾಗ್ತೀವಿ ಎಂದು ಮುಂದೆ ಹೋದರೆ. ನಿಮಗೆ ಗೋರ್ಮೆಂಟ್ ಜಾಬ್ ಇದೆಯಾ ತಿಂಗಳ ತಿಂಗಳ ಲಕ್ಷ ಲಕ್ಷ ದುಡಿ ಬೇಕು ಸ್ವಂತ ಕಾರ್ ಇರಬೇಕು ಬಂಗಲೆ ಇರಬೇಕು ಅಡಿಕೆ ತೋಟ ಇರಬೇಕು. ಇಷ್ಟೆಲ್ಲಾ ನೇಮಗಳು ಹಾಕ್ತಾರೆ. ಆದರೆ ಅಬ್ದುಲ್ಲ ನನ್ನ ಮದುವೆಯಾಗಿ ಹೋಗಿ ನರಕದಲ್ಲಿ’’ ಎಂದು ಬರೆದು ಹಂಚಿಕೊಳ್ಳಲಾಗಿದೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ವಿಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇಂಡಿಯಾ ನ್ಯೂಸ್ ಯುಪಿ/ಯುಕೆ ಜೂನ್ 19, 2025 ರಂದು ಅದೇ ವೈರಲ್ ವೀಡಿಯೊವನ್ನು ವರದಿ ಮಾಡಿದ ಎಕ್ಸ್ ಪೋಸ್ಟ್ ಲಭ್ಯವಾಗಿದೆ. ಪೋಸ್ಟ್‌ನಲ್ಲಿ ಒದಗಿಸಲಾದ ವಿವರಗಳ ಪ್ರಕಾರ, ಈ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದ್ದು, ವೀಡಿಯೊದಲ್ಲಿ ಕಂಡುಬರುವ ಪುರುಷ ಮತ್ತು ಮಹಿಳೆ ಗಂಡ ಮತ್ತು ಹೆಂಡತಿ ಆಗಿದ್ದಾರೆ.

ಈ ಕುರಿತು ಇನ್ನಷ್ಟು ಸರ್ಚ್ ಮಾಡಿದಾಗ, ಹಾಪುರ್ ಪೊಲೀಸರು ಜೂನ್ 26, 2025 ರಂದು ಹಂಚಿಕೊಂಡ X ಪೋಸ್ಟ್ ಕಂಡುಬಂದಿದೆ. ವೈರಲ್ ವೀಡಿಯೊ ಮುಸ್ಲಿಂ ದಂಪತಿಗಳ ನಡುವಿನ ಕೌಟುಂಬಿಕ ಕಲಹವನ್ನು ತೋರಿಸುತ್ತದೆ ಎಂದು ಪೋಸ್ಟ್ ಸ್ಪಷ್ಟಪಡಿಸಿದೆ, ‘‘ಇದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ (X/Twitter, Instagram, ಇತ್ಯಾದಿ) ಹಿಂದೂ-ಮುಸ್ಲಿಂ ಸಮಸ್ಯೆ ಎಂದು ತಪ್ಪಾಗಿ ಚಿತ್ರಿಸಲಾಗಿದೆ.

ಮಹಿಳೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಆಕೆಯ ಪತಿ, ಮತ್ತು ಇಬ್ಬರೂ ಮುಸ್ಲಿಮರು. ಈ ಘಟನೆ ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದಿದ್ದು, ಹಾಪುರ್ ನಗರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ದಂಪತಿಗಳು ಈಗ ಪರಸ್ಪರ ಒಪ್ಪಿಗೆಯ ಮೂಲಕ ಒಟ್ಟಿಗೆ ವಾಸಿಸುತ್ತಿದ್ದಾರೆ. ಕೋಮು ತಪ್ಪು ಮಾಹಿತಿಯನ್ನು ಹರಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಕಾನೂನು ಕ್ರಮಕ್ಕಾಗಿ ಅಂತಹ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಇತರರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ’’ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಸೌತ್ ಚೆಕ್ ತನ್ನ ತನಿಖೆಯಲ್ಲಿ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಹೇಳಿಕೆ ನಕಲಿ ಎಂಬುದು ಸ್ಪಷ್ಟವಾಗಿದೆ ಈ ಘಟನೆಗೆ ಯಾವುದೇ ಹಿಂದೂ-ಮುಸ್ಲಿಂ ಎಂಬ ಕೋಮು ಹಿನ್ನಲೆಯಿಲ್ಲ. ಈ ವಿಡಿಯೋ ಮುಸ್ಲಿಂ ದಂಪತಿಗಳ ನಡುವಿನ ಜಗಳದ ವೀಡಿಯೊವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಬೈಕ್ ಸವಾರರು ಟೋಲ್‌ ಕಟ್ಟಬೇಕು ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights