ಕುವೆಂಪು ಆಶಿಸಿದ ಭಾರತ ಉಳಿಸಿಕೊಳ್ಳೋಣ: ಬಸವ ಶ್ರೀ ಸ್ವಾಮೀಜಿ

ಭಾರತದ ಬಲವೇ ಅನೇಕತೆಯಲ್ಲಿ ಏಕತೆ ಎಂಬುದಾಗಿದೆ. ಕುವೆಂಪು ಅವರಂಥ ಮಹಾಕವಿಗಳು ಹೇಳಿದಂತೆ ಹಿಂದೂ, ಕ್ರೈಸ್ತ, ಮುಸಲ್ಮಾನ ಪಾರಸಿಕ ಜೈನರುದ್ಯಾನವೆಂಬುದೇ ಭಾರತದ ಹೆಗ್ಗಳಿಕೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಶರಣರು ಹೇಳಿದರು‌.

ನಗರದ ಪತ್ರಿಕಾ ಭವನದಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ನಡೆದ ಸಂವಿಧಾನ ಪ್ರಸ್ತಾವನೆಯ ಓದು, ಕುವೆಂಪು ಗೀತಗಾಯನ, ನಾಡಗೀತೆ ವಾಚನ ಮತ್ತು ಸರ್ವಧರ್ಮ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

   

ಎಲ್ಲ ಮತ-ಧರ್ಮ, ತತ್ವ, ಸಿದ್ಧಾಂತಗಳಿಗೂ ಈ ದೇಶ ನೆಲೆಯಾಗಿದೆ. ಎಲ್ಲವನ್ನೂ ಪೊರೆದಿದೆ. ಎಲ್ಲರ ಸಹಬಾಳ್ವೆಯ, ಸಾಮರಸ್ಯದಲ್ಲೇ ಎಲ್ಲರ ಹಿತವಿದೆ. ಏಳಿಗೆ ಇದೆ ಎಂಬುದನ್ನು ಶತಮಾನಗಳಿಂದ ತೋರಿಸಿಕೊಟ್ಟಿದೆ. ಹಾಗಾಗಿ ಇಂದು ಕೂಡ ಕುವೆಂಪು ಅವರಂಥ ಮೇರು ಕವಿಗಳು ಕಂಡ, ಡಾ ಬಿ ಆರ್ ಅಂಬೇಡ್ಕರ್ ಅವರಂಥ ಮಹಾನುಭಾವರು ಕನಸಿದ ಸರ್ವ ಜನಾಂಗದ ಶಾಂತಿಯ ತೋಟವಾದ ನಾಡನ್ನು ಹಾಗೆಯೇ ಉಳಿಸಿಕೊಂಡು ಹೋಗಬೇಕಿದೆ‌. ಆ ದಿಸೆಯಲ್ಲಿ ಕುವೆಂಪು ಅವರ ಜನ್ಮದಿನವಾದ ಇಂದು ನಮ್ಮ ಸಂವಿಧಾನದ ಆಶಯವನ್ನು ಉಳಿಸಿಕೊಳ್ಳುವ ಪಣದೊಂದಿಗೆ ಅದರ ಪ್ರಸ್ತಾವನೆ ವಾಚನ ಮತ್ತು ಸರ್ವಧರ್ಮ ಸಹಭೋಜನ ಬಹಳ ಅರ್ಥಪೂರ್ಣ ಎಂದು ಹೇಳಿದರು.

ಮುಸ್ಲಿಂ ಧರ್ಮಗುರು ಜಾಮಿಯಾ ಮಸೀದಿಯ ಅಖಿಲ್ ರಝಾ, ಎಲ್ಲರೂ ದೇಶದ ಸಮಗ್ರತೆ ಮತ್ತು ಏಕತೆಗೆ ಪಣತೊಟ್ಟು ಪರಸ್ಪರ ಸಹೋದರತೆಯಿಂದ ದುಡಿಯುವುದೇ ದೇಶದ ಏಳಿಗೆ ಗುಟ್ಟು. ಹಾಗೆ ಎಲ್ಲರೂ ಪರಸ್ಪರ ಜೊತೆಯಾಗಿ ಹೆಜ್ಜೆ ಹಾಕಿದರೆ ಖಂಡಿತಾ ನಾವು ವಿಶ್ವಗುರು ಆಗ್ತೀವಿ. ನಾವೆಲ್ಲಾ ನಮ್ಮ ತಾಯ್ನೆಲೆದ ಒಳಿತಿಗೆ ಒಗ್ಗಟ್ಟಿನ ಮಂತ್ರ ಪಠಿಸೋಣ. ಒಡೆಯುವ ಶಕ್ತಿಗಳ ವಿರುದ್ಧ ಏಕತೆಯ ದನಿ ಮೊಳಗಿಸೋಣ ಎಂದರು.

ಕ್ರೈಸ್ತ ಧರ್ಮಗುರು ಫಾದರ್ ವೀರೇಶ್ ಅವರು, ಸರ್ವಜನಾಂಗದ ಶಾಂತಿಯ ತೋಟವನ್ನು ಹಾಗೆಯೇ ಉಳಿಸಿಕೊಂಡು ಹೋಗುವ ಸವಾಲು ನಮ್ಮ ಮುಂದಿದೆ. ಆ ಹಿನ್ನೆಲೆಯಲ್ಲಿ ನಮಗೆ ಇಂದು ಸಂವಿಧಾನ ಮತ್ತು ಅದರ ಆಶಯಗಳನ್ನು ಸಾರಿದ ಕುವೆಂಪು ಅವರಂಥ ಮೇಧಾವಿಗಳ ಸಹಬಾಳ್ವೆಯ ಸಂದೇಶಗಳು ಅಸ್ತ್ರವಾಗಬೇಕು ಎಂದರು.

ಪ್ರಮುಖರಾದ ಜಮಾತೆ ಇಸ್ಲಾಂ ಸಂಘಟನೆ ಅಬ್ದುಲ್ ವಹಾಬ್, ಹಿರಿಯ ವಕೀಲ ಶೆಹ್ರಾಜ್, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್ ಮಂಜುನಾಥ್, ದಸಂಸ ನಾಯಕ ಗುರುಮೂರ್ತಿ, ಲೇಖಕಿ ಅಕ್ಷತಾ ಹುಂಚದಕಟ್ಟೆ, ಪತ್ರಕರ್ತ ಶಶಿ ಸಂಪಳ್ಳಿ, ಮಲ್ಲಿಕಾರ್ಜುನ ಹೊಸಪಾಳ್ಯ, ಟಿ ಎಲ್ ರೇಖಾಂಬ, ಮಂಜುಳಾ ರಾಜು, ಪ್ರಕಾಶ್ ಮರ್ಗನಹಳ್ಳಿ, ಭಾಸ್ಕರ್, ಮಾಲತೇಶ್ ಬೊಮ್ಮನ ಕಟ್ಟೆ, ಕಿರಣ್, ಹುಸೇನ್, ಸಮುದಾಯದ ಪ್ರಭಾಕರನ್ ಕೃಷ್ಣನ್ ಮತ್ತಿತರರು ಭಾಗವಹಿಸಿದ್ದರು.

ಸಾಮಾಜಿಕ ಹೋರಾಟಗಾರ ಕೆ ಪಿ ಶ್ರೀಪಾಲ್ ಅವರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಮೂವರೂ ಧರ್ಮಗುರುಗಳು ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ “ಸರ್ವ ಜನಾಂಗದ ಶಾಂತಿಯ ತೋಟ” ಎನ್ನುವ ಘೋಷದಡಿ ಇಡೀ ರಾಜ್ಯದಾದ್ಯಂತ ಸಹಸ್ರ ಭೋಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹೊಸಪೇಟೆಯಿಂದ 2 ಕಿ ಮೀ ದೂರವಿರುವ ಸಂಕ್ಲಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ರಂಗಪ್ಪ, ತಿಪ್ಪೇಸ್ವಾಮಿ, ಉಮಾ ಅವರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. “ಓ ನನ್ನ ಚೇತನ” ಗೀತೆಯೊಂದಿಗೆ ಪ್ರಾರಂಭವಾಗಿ ನಮ್ಮ ಹೆಮ್ಮೆಯ ಸಂವಿಧಾನದ ಪ್ರಸ್ತಾವನೆಯನ್ನು ಓದಲಾಯಿತು.

ನಂತರ ‘ಸೌಹಾರ್ದ ಭೋಜನ’ ಏರ್ಪಡಿಸಲಾಗಿತ್ತು. ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡ ಅಲ್ಲಿಯ ತಾ0ಡದ ಹೆಣ್ಣುಮಕ್ಕಳು ಮುಸ್ಲಿಂ ಮತ್ತು ಅಲ್ಲಿಯ ದಲಿತ ಹೆಣ್ಣುಮಕ್ಕಳೊಂದಿಗೆ ಪರಸ್ಪರ ತುತ್ತುಗಳನ್ನು ಹಂಚಿಕೊಂಡು ಪ್ರೀತಿ ತೋರಿದರು. ಕೂಲಿಗೆ ಹೋಗುವ ಸಮಯದ ಪರಿವೆಯನ್ನು ಮರೆತು ಕುಶಲೋಪರಿ ವಿಚಾರಿಸಿದರು. ಪುಟ್ಟಹಳ್ಳಿಯಲ್ಲಿ ನೆರೆದವರಿಗೆಲ್ಲ ಹೃದಯ ತುಂಬಿಬಂದಿತ್ತು. ಅಲ್ಲಿಯ ಜನ ಜಾತಿ ಹಂಗು ತೊರೆದು ಕುವೆಂಪು ಹೆಸರಿನ ಸವಿ ದಿನಕ್ಕೆ ಸಹಿ ಹಾಕಿದರು.
ಪಾಲುಗೊಳ್ಳಲು ಹೋದ ನಮಗೂ ತಮ್ಮ ಉಡುಗೆ ನೀಡಿ, ಖುಷಿಪಟ್ಟರು, ತುತ್ತು ಹಂಚಿ ಮಾನವೀಯತೆ ಮೆರೆದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights