ಬೆಂಗಳೂರಿಗಿಲ್ಲ ಕೊರೊನಾ ಮುಕ್ತಿ; ಡೇಂಜರ್ ಜೋನ್‌ನಲ್ಲಿ ನಗರದ 34 ವಾರ್ಡ್‌ಗಳು

ರಾಜಧಾನಿಯಲ್ಲಿ ಕೊರೊನಾ ಅಬ್ಬರ ಏರುಗತಿಯಲ್ಲಿದ್ದು ಬೆಂಗಳೂರಿನ 34 ವಾರ್ಡುಗಳಲ್ಲಿ ಸೋಂಕಿನ ಹರಡುವಿಕೆ ತೀವ್ರವಾಗಿದೆ.. ಕಿಕ್ಕಿರಿದ ಜನ ವಸತಿ ಮತ್ತು ಅತಿ ಹೆಚ್ಚು ಓಡಾಟದಿಂದಾಗಿ ನಗರದ 34 ವಾರ್ಡುಗಳು ಡೇಂಜರ್ ಜೋನಿನಲ್ಲಿವೆ ಎಂದು ಬಿಬಿಎಂಪಿ ಮಾಹಿತಿ ಹೇಳುತ್ತಿದೆ.

ಶಾಂತಲಾನಗರ, ಆರ್‌ಆರ್ ನಗರ, ವಿವಿ ಪುರ, ಹೆಮ್ಮಿಗೆಪುರ ಸೇರಿದಂತೆ ಬೆಂಗಳೂರಿನ 34 ಪ್ರದೇಶಗಳಲ್ಲಿ ಕೊರೋನಾ ಕೇಕೆ ತೀವ್ರಗೊಂಡಿದೆ. ಈ ಪ್ರದೇಶಗಳಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಮಂದಿ ವಾಸವಿದ್ದು ಎಲ್ಲರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಅಂಕೆ ಮೀರಿದ್ದು, ಶನಿವಾರ ಒಂದೇ ದಿನ ಸಾವಿರದ ಗಡಿ ದಾಟಿತ್ತು. ಬೀಗಮುದ್ರೆ (ಲಾಕ್‌ಡೌನ್) ತೆರವಿನ ತರುವಾಯದಲ್ಲಿ ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ತೀಕ್ಷ್ಣ ಏರಿಕೆ ಕಂಡಿದೆ. ಬೇರೆ ಬೇರೆ ಊರುಗಳಿಂದ ಬರುವವರ ಸಂಖ್ಯೆಯಲ್ಲಿನ ಹೆಚ್ಚಳ ಹಾಗೂ ಸಾಮಾಜಿಕ ಅಂತರದ ನಿಬಂಧನೆಗಳನ್ನು ಜನ ಗಾಳಿಗೆ ತೂರಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಈ ಮಧ್ಯೆ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇಲ್ಲ. ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ದಯವಿಟ್ಟು ನಾಗರಿಕರು ಬೆಂಗಳೂರು ತೊರೆಯಬೇಡಿ ಎಂದು ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಬೆಂಗಳೂರಿನ ಪ್ರತೀ ವಾರ್ಡ್ ಗೆ ಎರಡರಂತೆ ಆಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಜನತೆಗೆ ಕೊರೊನಾ ಭಯ ಬೇಡ. ಬೆಂಗಳೂರಿನಲ್ಲೇ ಸುರಕ್ಷಿತವಾಗಿರಿ. ಯಾವುದೇ ಕಾರಣಕ್ಕೂ ಸೋಂಕಿತರು ಆತಂಕ ಪಡುವ ಅಗತ್ಯವಿಲ್ಲ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್ ಗಳು ಸೇರಿದಂತೆ ಬೆಂಗಳೂರಿನ ಒಟ್ಟು 41 ಸ್ಥಳಗಳಲ್ಲಿ 4958 ಹಾಸಿಗೆಗಳನ್ನು ವಿಶೇಷವಾಗಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇವುಗಳಲ್ಲಿ 2107 ಹಾಸಿಗೆಗಳು ಅಂದರೆ ಸುಮಾರು ಶೇ.42.49% ಹಾಸಿಗೆಗಳು ಖಾಲಿಯಿವೆ ಎಂದು ವೈದ್ಯ ಶಿಕ್ಷಣ ಸಚಿವ ಸುಧಾಕರ ಅವರು ಮಾಹಿತಿ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights