PKL Season 6 : ಬೆಂಗಳೂರು ಬುಲ್ಸ್ ತಂಡಕ್ಕೆ ಚೊಚ್ಚಲ ಕಬಡ್ಡಿ ಲೀಗ್ ಪ್ರಶಸ್ತಿ

ಪವನ್ ಕುಮಾರ್ ಶೇರಾವತ್. ಈ ಹೆಸರನ್ನು ರಾಜ್ಯದ ಕಬಡ್ಡಿ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವೆ ಇಲ್ಲ. ಆರನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನ ಫೈನಲ್ ಪಂದ್ಯದಲ್ಲಿ ಸ್ಟಾರ್ ಪ್ಲೇಯರ್ ಆಡಿದ ಧಾಟಿಗೆ ಎದುರಾಳಿಗಳು ಸಹ ಸಲಾಂ ಎಂದಿದ್ದಾರೆ.

ಮುಂಬೈನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 38-33 ರಿಂದ ಗುಜರಾತ್ ಫಾರ್ಚುನ್ ಜೇಂಟ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಸಂಭ್ರಮಿಸಿದೆ. ಈ ಮೂಲಕ ಪ್ರಶಸ್ತಿ ಕನಸು ನನಸಾಗಿದೆ.

ಮೊದಲಾವಧಿಯ ಆಟದಲ್ಲಿ ಕೊಂಚ ಹಿನ್ನಡೆ ಅನುಭವಿಸಿದ್ದ  ಬೆಂಗಳೂರು ತಂಡ, ಎರಡನೇ ಅವಧಿಯಲ್ಲಿ ಆಡಿದ ಆಟ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಅದ್ಭುತ ರೇಡಿಂಗ್ ಹಾಗೂ ಟ್ಯಾಕಲ್ ಗಳ ಮುಲಕ ನಿರ್ಣಾಯಕ ಕ್ಷಣದಲ್ಲಿ ಮಿಂಚಿದ ಬುಲ್ಸ್ ಪ್ಲೇಯರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಹಿಂದೆಯೂ ಒಮ್ಮೆ ಫೈನಲ್ ಗೆ ಅರ್ಹತೆ ಪಡೆದು ಸೋಲು ಕಂಡಿದ್ದ ಬೆಂಗಳೂರು ತಂಡ, ಈ ಬಾರಿ ತನ್ನ ನ್ಯೂನತೆಗಳನ್ನು ಮೆಟ್ಟಿ ನಿಂತಿದೆ. ಪಂದ್ಯದ ಎಲ್ಲ ವಿಭಾಗಗಳಲ್ಲೂ ಶ್ರೇಷ್ಠ ಆಟವಾಡಿದ ಬುಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬುಲ್ಸ್ ತಂಡ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ 26 ರೈಡಿಂಗ್ ಅಂಕ ಕಲೆ ಹಾಕಿದರೆ, ರಕ್ಷಣಾ ವಿಭಾಗದಲ್ಲಿ 7 ಅಂಕ ಕಲೆ ಹಾಕಿತು. ಅಲ್ಲದೆ ಎದುರಾಳಿ ತಂಡವನ್ನು ಎರಡು ಬಾರಿ ಆಲೌಟ್ ಮಾಡಿದ ರೋಹಿತ್ ಕುಮಾರ್ ಪಡೆ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು.

ಮುಂಬೈನಲ್ಲಿ ಸೇರಿದ್ದ ಬೆಂಗಳೂರು ಬುಲ್ಸ್ ಅಭಿಮಾನಿಗಳು ಕೊನೆಯ 20 ನಿಮಿಷದ ಆಟವನ್ನು ಮಸ್ತ್ ಮಜಾ ಮಾಡಿದ್ದಾರೆ. ಪವನ್ ಕುಮಾರ್ ತಮ್ಮ ಕಲಾತ್ಮಕ ಆಟದ ಮೂಲಕವೇ ಎದುರಾಳಿ ತಂಡಕ್ಕೆ ಕಂಠಕರಾಗಿ ಅಂಕಗಳನ್ನು ಕಲೆ ಹಾಕಿ  ಅಬ್ಬರಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಪವನ್ 25 ಬಾರಿ ಎದುರಾಳಿ ಅಂಗಳ ಪ್ರವೇಶಿಸಿ, 22 ಅಂಕ ಕಲೆ ಹಾಕಿ ಆರ್ಭಟಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights