ಪಕ್ಷಕ್ಕೆ ಅಧ್ಯಕ್ಷರನ್ನೇ ನೇಮಿಸಿಕೊಳ್ಳಲಾಗದ ಕಾಂಗ್ರೆಸ್ ದೇಶಕ್ಕೆ ಮತ್ತೇನು ನೀಡಲು ಸಾಧ್ಯ: ಕೇಜ್ರಿವಾಲ್
ತಮ್ಮದೇ ಪಕ್ಷಕ್ಕೆ ಒಬ್ಬರು ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಸಾಧ್ಯವಾಗದೇ ಇರುವ ಕಾಂಗ್ರೆಸ್ ಪಕ್ಷ, ದೇಶಕ್ಕೆ ಏನು ಕೊಡುಗೆ ನೀಡಬಲ್ಲುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಸತ್ತುಹೋಗಿದೆ. ಕೆಲವು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್, ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದೆ ಸರ್ಕಾರದ ಪತನವಾಗುತ್ತಿದೆ. ಕಾಂಗ್ರೆಸ್‌ನ ಶಾಸಕರು ಮಾರಾಟವಾಗುತ್ತಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ತನ್ನ ಭವಿಷ್ಯವನ್ನು ಕಳೆದುಕೊಂಡಿದೆ ಎಂದು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.
ದೇಶದವು ಹಿಂದೆಂದೂ ಕಂಡರಿಯಂತಹ ಸಂಕಷ್ಟವನ್ನು ಎದುರಿಸುತ್ತಿದೆ. ಕೊರೊನಾ, ಆರ್ಥಿಕ ಕುಸಿತದಂತಹ ಸಾಕಷ್ಟು ಸವಾಲುಗಳು ದೇಶದ ಮುಂದಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಆಂತರಿಕ ಕಚ್ಚಾಟದಲ್ಲಿ ನಿರತವಾಗಿದೆ. ಪಕ್ಷಕ್ಕೆ ಒಬ್ಬ ಅಧ್ಯಕ್ಷರನ್ನೇ ನೇಮಿಸಿಕೊಳ್ಳಲಾಗದ ಕಾಂಗ್ರೆಸ್, ದೇಶದಲ್ಲಿ ಮತ್ತೇನು ಮಾಡಬಲ್ಲುದು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸೋನಿಯಾ ಗಾಂಧಿಗೆ 1% ಬೆಂಬಲವೂ ಇಲ್ಲ; ಆಂತರಿಕ ಚುನಾವಣೆ ನಡೆಯದಿದ್ದರೆ 50 ವರ್ಷ ಕಾಂಗ್ರೆಸ್‌ಗೆ ಅಧಿಕಾರವಿಲ್ಲ: ಗುಲಾಂ ನಬೀ
ಜನರಿಗೆ ರಾಜಕೀಯ ಪಕ್ಷದ ಮೇಲಿನ ನಂಬಿಕೆ ಹೋಗಿದೆ. ಜನರನ್ನು ಹಲವು ಪಕ್ಷಗಳು ಮೋಸಗೊಳಿಸುತ್ತಿವೆ. ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷ ಸ್ಥಾನಕ್ಕೆ ನಿರ್ವಾತ ಸೃಷ್ಟಿಯಾಗಿದೆ. ಆ ಸ್ಥಾನವನ್ನು ಮುಂದಿನ ಚುನಾವಣೆಯ ವೇಳೆಗೆ ಆಮ್ ಆದ್ಮಿ ಪಕ್ಷ ತುಂಬುತ್ತದೆ ಎಂಬುದು ಅಹಂಕಾರದ ಮಾತಾಗುತ್ತದೆ. ನಮ್ಮದು ಚಿಕ್ಕ ಪಕ್ಷ, ಮುಂದಿನ ಚುನಾವಣೆಗೆ ಇನ್ನೂ ಸಮಯವಿದೆ. ಆ ವೇಳೆಗೆ ಜನರನ್ನು ಸಂಘಟಿಸಿ, ರಾಷ್ಟ್ರದ್ಯಂತ ಪಕ್ಷವನ್ನು ಬೆಳೆಸುವ ಪ್ರಯತ್ನವನ್ನು ಪಕ್ಷ ಮಾಡಲಿದೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಬಲ 25ಕ್ಕೆ ಕುಸಿಯದಿರಲಿ: ಕಾಳಜಿಯಿಂದ ಪತ್ರ ಬರೆದಿದ್ದೇವೆ ಎಂಬ ಭಿನ್ನಮತೀಯರು!

