ಅಮಿತ್‌ ಶಾ ಭಾಗಿಯಾಗಿದ್ದ ಭದ್ರಾವತಿ RAF ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕನ್ನಡವೇ ಇಲ್ಲ; ಹೆಚ್‌ಡಿಕೆ ಕಿಡಿ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎರಡು ದಿನಗಳ ಕರ್ನಾಟಕ ಭೇಟಿಗೆ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಶನಿವಾರ ಅವರು ಭದ್ರಾವತಿಯಲ್ಲಿ RAF ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಶಂಕುಸ್ಥಾಪನಾ ಕಾರ್ಯಕ್ರಮಕ್ಕಾಗಿ ಮಾಡಿಸಲಾಗಿದ್ದ ಘಲಕದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಹೆಸರುಗಳಿದ್ದವೇ ಹೊರತು, ಕನ್ನಡದಲ್ಲಿ ಒಂದೇ ಒಂದು ಪದವೂ ಇರಲಿಲ್ಲ.

ಹೀಗಾಗಿ ಸರ್ಕಾರದ ಕನ್ನಡ ವಿರೋಧಿ ನಡೆಗೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಹಲವರು ಸರ್ಕಾರದ ಭಾಷಾ ಹೇರಿಕೆ ಧೋರಣೆಯನ್ನು ಖಂಡಿಸಿದ್ದರು.

ಈ ಕಾರ್ಯಕ್ರಮ ಗುಜರಾತ್‌ನಲ್ಲೂ, ಉತ್ತರ ಪ್ರದೇಶದಲ್ಲಿ ನಡೆದಿದೆ. ಇದು ಕರ್ನಾಟಕದಲ್ಲ ಎಂದು ಭಾವಿಸಿದ್ದೆವು. ಕಾರ್ಯಕ್ರಮದ ಫಲಕದಲ್ಲಿ ಒಂದೂ ಕನ್ನಡ ಪದ ಇಲ್ಲವಲ್ಲಾ ಎಂದು ವ್ಯಂಗ್ಯವಾಗಿ ವಿರೋಧ ವ್ಯಕ್ತವಾಗಿತ್ತು.

ಅಲ್ಲದೆ, ಸರ್ಕಾರದ ಭಾಷಾ ಧೋರಣೆಯನ್ನು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರೂ ವಿರೋಧಿಸಿದ್ದು, ಹಿಂದಿ-ಆಂಗ್ಲ ಭಾಷೆಯ ನಿಷ್ಠ ಧೋರಣೆಯಲ್ಲಿ ಕನ್ನಡ ಭಾಷೆಯನ್ನು ಅವಗಣನೆ ಮಾಡಿರುವ ಅಮಿತ್ ಷಾ ಅವರ ಧೋರಣೆ ಕನ್ನಡ ವಿರೋಧಿತನವನ್ನು ತೋರಿಸುತ್ತದೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಶಿವಮೊಗ್ಗದ ಭದ್ರಾವತಿಯಲ್ಲಿ ಶನಿವಾರ RAF ಘಟಕಕ್ಕೆ ಗೃಹಸಚಿವರಾದ ಅಮಿತ್ ಷಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಅಡಿಗಲ್ಲು ಫಲಕ ಅನಾವರಣಗೊಳಿಸಿದ್ದಾರೆ. ಅಡಿಗಲ್ಲು ಫಲಕಗಳು ಹಿಂದಿ ಮತ್ತು ಆಂಗ್ಲಭಾಷೆಯಲ್ಲಿವೆ. ಇಲ್ಲಿ ಕನ್ನಡದ ಅವಗಣನೆ ನಿಚ್ಚಳವಾಗಿ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.

ವೈವಿಧ್ಯಮಯ ಭಾರತ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದ್ದು,ಆಯಾ ರಾಜ್ಯ ಭಾಷೆ ಗೌರವಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಗೃಹ ಸಚಿವರೆ ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿರುವುದು ಕನ್ನಡಕ್ಕೆ,ಕನ್ನಡಿಗರಿಗೆ ಮಾಡಿದ ಅಗೌರವ.ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳು ನಾಡು-ನುಡಿಯ ಘನತೆಯನ್ನು ಮರೆತದ್ದು ಅತ್ಯಂತ ಖಂಡನೀಯ ಎಂದಿದ್ದಾರೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ RAF ಘಟಕ ಸ್ಥಾಪನೆಗೆ ಕನ್ನಡದ ನೆಲವನ್ನೆ ಕೊಟ್ಟಿದ್ದು, ಈ ಪರಿಜ್ಞಾನವಿಲ್ಲದೆ ಕನ್ನಡದಲ್ಲಿ ಅಡಿಗಲ್ಲು ಫಲಕ ಇಲ್ಲದಿರುವುದು ಅಕ್ಷಮ್ಯ. ಅಮಿತ್ ಷಾ ಅವರು ತ್ರಿಭಾಷಾ ಸೂತ್ರ ಉಲ್ಲಂಘಿಸಿರುವುದಕ್ಕೆ ಕನ್ನಡಿಗರಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನಾಡು-ನುಡಿಯ ಘನತೆಗೆ ಚ್ಯುತಿ ಬಂದಾಗ ಸಹಿಸಿಕೊಳ್ಳುವವರಿಗೆ ಈ ರಾಜ್ಯದ ಆಡಳಿತ ನಡೆಸುವ ಅರ್ಹತೆ ಇಲ್ಲ. ಕೇಂದ್ರದ ಗೃಹಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡೆ ಕನ್ನಡಕ್ಕೆ ಬಗೆದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಬೆಂಗಳೂರಿಗೆ ಅಮಿತ್ ಶಾ: ಭಿಕ್ಷುಕರು ಮತ್ತು ನಾಯಿಗಳ ಸೆರೆ; ವಿಧಾನಸೌಧ ಸಿಬ್ಬಂದಿಗೆ ಅರ್ಧ ದಿನ ರಜೆ: ಜನರ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights