ಧಾರವಾಡ ಭೀಕರ ಅಪಘಾತ ಪ್ರಕರಣ : ಸಾವನ್ನಪ್ಪಿದ ಎಲ್ಲಾ ಮಹಿಳೆಯರು ವೈದ್ಯರೆಂದು ತಪ್ಪು ಸಂದೇಶ ಹಂಚಿಕೆ!

ಕಳೆದ ವಾರ ಜನವರಿ 15ರಂದು ಧಾರವಾಡಲ್ಲಿ ಸಂಭವಿಸಿದ ಟೆಂಪೋ ಟ್ರಾವೆಲರ್ ಹಾಗೂ ಟಿಪ್ಪರ್ ನಡುವಿನ ಅಪಘಾತದಲ್ಲಿ  11 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆಯ ಬಗ್ಗೆ ತಪ್ಪು ಸಂದೇಶ ಹಂಚಿಕೊಳ್ಳಲಾಗಿದೆ.

ಈ ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆಯರೆಲ್ಲರೂ ವೈದ್ಯರು ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ ಈ ಹೇಳಿಕೆ ತಪ್ಪಾಗಿದ್ದು ಅಪಘಾತದಲ್ಲಿ ಒಟ್ಟು 11 ಜನ ಮೃತಪಟ್ಟಿದ್ದಾರೆ. ಇದರಲ್ಲಿ 9 ಜನ ಮಹಿಳೆಯರಿದ್ದಾರೆ. ಈ 9 ಜನ ಮೃತ ಮಹಿಳೆಯರಲ್ಲಿ ಒಬ್ಬರು ಮಾತ್ರ ವೈದ್ಯರು ಎಂದು ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪಿ ಕೃಷ್ಣಕಾಂತ್ ಸ್ಪಷ್ಟಪಡಿಸಿದ್ದಾರೆ.

ಅವರ ಹೆಸರು ಡಾ.ವೀಣಾ ಪ್ರಕಾಶ್. ಇವರು ಜೆಎಂಎಂ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಆ ಗುಂಪಿನಲ್ಲಿದ್ದ ಇನ್ನೂ ಇಬ್ಬರು ಮಹಿಳೆಯರಾದ ಉಷಾ ರಾಮ್ ಮತ್ತು ಪ್ರೀತಿ ರವಿಕುಮಾರ್ ಅವರು ವೈದ್ಯರ ಪತ್ನಿಯರಾಗಿದ್ದಾರೆ.

ಅಪಘಾತದಲ್ಲಿ ಮೃತರಾದವರ ವಿವರ ಹೀಗಿದೆ- ವರ್ಷಿತಾ ವೀರೇಶ್ (46), ಮಂಜುಳಾ ನಟೇಶ್ (47), ರಾಜೇಶ್ವರಿ ಶಿವಕುಮಾರ್ (40), ವೀಣಾ ಪ್ರಕಾಶ್ (47), ಮಲ್ಲಿಕಾರ್ಜುನ ತಿಮ್ಮಪ್ಪ (27), ಹೇಮಲತಾ (40), ಪರಂಜ್ಯೋತಿ (47), ಯಶ್ಮಿಕಾ (20), ರಾಜು ಸೋಮಪ್ಪ (38), ಕ್ಷೀರಾ ಸುರೇಶ್ (47), ಪ್ರೀತಿ ರವಿಕುಮಾರ್ (46)

ಅಪಘಾತದಲ್ಲಿ ಗಾಯಗೊಂಡವರೆಂದರೆ- ಆಶಾ ಬೇತೂರ್ (47), ವೇದಾ (46), ಉಷಾರಾಮ್(46), ಪೂರ್ಣಿಮಾ ಸುರೇಶ್ ಬಾಬು (46), ಪ್ರವೀಣಾ ಪ್ರಕಾಶ್ (46) ಮತ್ತು ಪ್ರಕರಣದ ಪ್ರಮುಖ ಆರೋಪಿಯಾದ ಟಿಪ್ಪರ್ ಚಾಲಕ ಬಸವರಾಜ್ ಖಾರದೊಳ್ಳಿ (25)

ಟಿಟಿಯಲ್ಲಿದ್ದವರು ಶಾಲಾದಿನಗಳಿಂದಲೂ ಪರಸ್ಪರ  ಪರಿಚಯದವರಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಮತ್ತೆ ಸಂಪರ್ಕದಲ್ಲಿದ್ದರು. ದಾವಣಗೆರೆಯಲ್ಲಿ ಊಟಕ್ಕಾಗಿ ಸೇರುತ್ತಿದ್ದ ಇವರು ಈ ಬಾರಿ ಗೋವಾದಲ್ಲಿ ರೆಸಾರ್ಟ್ ಬುಕ್ ಮಾಡಿದ್ದರು. ಧಾರವಾಡದಲ್ಲಿ ಉಪಹಾರಕ್ಕಾಗಿ ವಾಹನ ನಿಲ್ಲಿಸಬೇಕಿತ್ತು, ಅಷ್ಟರಲ್ಲಿ ವಾಹನ ಅಪಘಾತಕ್ಕೀಡಾಗಿ ದುರಂತ ನಡೆದು ಹೋಗಿತ್ತು.

ಆದ್ದರಿಂದ ಘಟನೆಯಲ್ಲಿ ಸಾವನ್ನಪ್ಪಿದ ಎಲ್ಲಾ ಮಹಿಳೆಯರು ವೈದ್ಯರಲ್ಲ. ಬದಲಿಗೆ ಅವರಲ್ಲಿ ಒಬ್ಬರು ಮಾತ್ರ ವೈದ್ಯರಾಗಿದ್ದು, ಇನ್ನುಳಿದಂತೆ ಇಬ್ಬರು ವೈದ್ಯರ ಪತ್ನಿಯರಾಗಿದ್ದಾರೆನ್ನುವುದು ದೃಢಪಟ್ಟಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights