ಕನ್ನಡ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್; ಕನ್ನಡದಲ್ಲೇ ಇಂಜಿನಿಯರಿಂಗ್ ಬೋಧನೆಗೆ ಅನುಮತಿ!
ಹಲವಾರು ವಿದ್ಯಾರ್ಥಿಗಳು ವೈದ್ಯರಾಗಬೇಕು, ಇಂಜಿನಿಯರ್‌ಗಳಾಗಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಆದರೆ, ಇಂಗ್ಲಿಷ್ ಬಾರದ ಒಂದೇ ಕಾರಣದಿಂದ ಹಲವು ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ಕೆ ಮಾಡುವುದರಿಂದ ಹಿಂದೆ ಸರಿಯುತ್ತಾರೆ. ಅಂತಹ ವಿದ್ಯಾರ್ಥಿಗಳೂ ಕೂಡ ತಮ್ಮ ಸ್ಥಳೀಯ ಭಾಷೆಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಅನುವು ಮಾಡಿಕೊಡುವ ಕೆಲಸಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(AICTE) ಮುಂದಾಗಿದ್ದು, ಇಂಜಿನಿಯರಿಂಗ್ ಕೋರ್ಸ್‌ನ್ನು ಸಹ ಕನ್ನಡದಲ್ಲಿ ಬೋಧಿಸಲು ಅವಕಾಶ ನೀಡಿದೆ.
2020-21ನೇ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ ಏಳು ಪ್ರಾದೇಶಿಕ ಭಾಷೆಗಳಲ್ಲೂ ಇಂಜಿನಿಯರಿಂಗ್ ಶಿಕ್ಷಣ ನೀಡಲು AICTE ಸೂಚನೆ ನೀಡಿದೆ. ಎಐಸಿಟಿಇ ಸೂಚನೆ ನೀಡುತ್ತಿದ್ದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕನ್ನಡದಲ್ಲಿ ಇಂಜಿನಿಯರಿಂಗ್ ಮಾಡಲು ಅವಕಾಶ ಕಲ್ಪಿಸುತ್ತಿದೆ.ವಿಟಿಯು ಕನ್ನಡದಲ್ಲಿ ಇಂಜಿನಿಯರಿಂಗ್ ಕೋರ್ಸ್ ಬೋಧನೆ ಮಾಡುವುದಕ್ಕಾಗಿ ಪಠ್ಯಕ್ರಮ ಸಿದ್ಧಪಡಿಸಿಕೊಳ್ಳುತ್ತಿದೆ.
ವಿಟಿಯು ಇಂಜಿನಿಯರಿಂಗ್ ಶಿಕ್ಷಣ ನೀಡಲು ಬೇಕಾದ ಪಠ್ಯಪುಸ್ತಕ ರಚಿಸಬೇಕಾಗಿದೆ. ಆಂಗ್ಲ ಭಾಷೆಯಲ್ಲಿರುವ ಪಠ್ಯಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಬೇಕಿದೆ. ಇದಕ್ಕಾಗಿ ವಿಟಿಯು ವಿಷಯ ತಜ್ಞರ ಸಮಿತಿ ರಚಿಸಿದ್ದು, ಸಮಿತಿಯು ಅನುವಾದ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎನ್ನಲಾಗಿದೆ.
ಇನ್ನೂ ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಕೋರ್ಸ್ ಮಾಡೋದಕ್ಕೆ ಅಷ್ಟೇ ಅಲ್ಲದೇ, ಹಿಂದಿ, ತಮಿಳು, ಮಲಯಾಳಂ, ಗುಜರಾತಿ, ಬಂಗಾಳಿ ಸೇರಿದಂತೆ 7 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಕೋರ್ಸ್ ವ್ಯಾಸಂಗ ಮಾಡಲು ಅವಕಾಶ ನೀಡಿದೆ. ಹೀಗಾಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡೋದಕ್ಕೆ ಬಯಸುವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲೂ ಶತಕ ಬಾರಿಸಿದ ಪೆಟ್ರೋಲ್ ದರ; ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 100 ರೂ.!

