ದೇವೇಗೌಡರನ್ನು ಭೇಟಿಯಾದ ಸಿಎಂ; ಬೊಮ್ಮಾಯಿ ವಿರುದ್ದ ಶಾಸಕ ಪ್ರೀತಂ ಗೌಡ ಅಸಮಾಧಾನ!

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದು ಬಂದಿದ್ದರು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡ, ಬಿಜಿಪಿ ಕಾರ್ಯಕರ್ತರಿಗೆ ಪಕ್ಷದ ಕಟ್ಟುವಲ್ಲಿ ಸ್ಥೈರ್ಯ ತುಂಬುವ ಬದಲು ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದೀರಿ, ಈ ಮೂಲಕ ಯಾವ ಸಂದೇಶ ಕೊಡಲು ಮುಂದಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಮಾತನಾಡಿರುವ ಅವರು, ಹಳೇ ಮೈಸೂರು, ಹಾಸನ ಮತ್ತು ರಾಜ್ಯದ ಇತರ ಭಾಗದ ಬಿಜೆಪಿ ಕಾರ್ಯಕರ್ತರಿಗೆ ಪಕ್ಷ ಕಟ್ಟುವಲ್ಲಿ ಮಾನಸಿಕವಾಗಿ ಸ್ಥೈರ್ಯ ತುಂಬಬೇಕು. ಅದನ್ನು ಬಿಟ್ಟು ನೀವು ಹೊಂದಾಣಿಕೆ ರಾಜಕೀಯಕ್ಕೆ ಇಳಿಯುತ್ತಿದ್ದೀರಿ. ಹೀಗೆ ನೀವು ಪಕ್ಷದ ಶಾಸಕರು, ಕಾರ್ಯಕರ್ತರಿಗೆ ಯಾವ ಸಂದೇಶ ನೀಡಲು ಹೊರಟಿದ್ದೀರಿ ಎಂದು ಕಿಡಿ ಕಾರಿದ್ದಾರೆ.

ಸಿಎಂ ಬೊಮ್ಮಾಯಿ ಅವರ ತಂದೆ ಎಸ್‌.ಆರ್‌.ಬೊಮ್ಮಾಯಿಯವರ ಸರ್ಕಾರವನ್ನು ಉರುಳಿಸಿದ್ದೇ ದೇವೇಗೌಡರು. ಅವರ ತಂದೆಯ ಸರ್ಕಾರವನ್ನು ಉರುಳಿಸಿದವರ ಮನೆಗೆ ಹೋಗುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ: ಈಶ್ವರಪ್ಪಗೆ RDPR; ಅರಗ ಜ್ಞಾನೇಂದ್ರಗೆ ಗೃಹ ಖಾತೆ!

ದೇವೇಗೌಡರ ಮನೆಗೆ ಹೋಗುವ ಬದಲು ಅವರು ಸಿದ್ದಗಂಗಾ ಶ್ರೀಗಳು, ಸುತ್ತೂರು ಮಠದ ಶ್ರೀಗಳು ಅಥವಾ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಬಹುದಿತ್ತು. ಬೊಮ್ಮಾಯಿ ನಡೆಯ ಬಗ್ಗೆ ಬೊಮ್ಮಾಯಿ ಅಭಿಮಾನಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ನಾವು ಹಾಸನದಲ್ಲಿ ದಿನಾ ಬೆಳಗ್ಗೆ ಜೆಡಿಎಸ್‌ ಪಕ್ಷದೊಂದಿಗೆ ಗುದ್ದಾಡಿ ಪಕ್ಷ ಕಟ್ಟುತ್ತಿದ್ದೇವೆ. ಆದರೆ, ಇನ್ನೊಬ್ಬರು ಹೋಗಿ ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ. ಹಾಸನ ಜಿಲ್ಲೆಯಾಗಿರಬಹುದು, ಹಳೆ ಮೈಸೂರು ಭಾಗವಾಗಿರಬಹುದು ಯಾವುದೇ ಹೊಂದಾಣಿಕೆ ರಾಜಕಾರಣ ಸಾಧ್ಯವಿಲ್ಲ, ಈ ಮೂಲಕ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಬೇಡಿ ಎಂದು ಸಿಎಂ ಬೊಮ್ಮಾಯಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಕಾರ್ಯಕರ್ತರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮುಖ್ಯಮಂತ್ರಿಗಳನ್ನು, ರಾಜ್ಯಾಧ್ಯಕ್ಷರನ್ನು, ನಮ್ಮ ಸಂಘ ಪರಿವಾರದ ಹಿರಿಯರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಮುಂದಿನ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜನತಾದಳವನ್ನು ಎದುರಿಸಬೇಕಾಗಿದೆ. ಹೀಗಿರುವಾಗ ಇವರು ಹೊಂದಾಣಿಕೆಗೆ ಮುಂದಾಗಿದ್ದಾರೆ. ಈ ಬಗ್ಗೆ ನಮಗೆ ಸ್ಪಷ್ಟ ಉತ್ತರ ಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕ್ರೀಡಾಂಗಣಗಳಿಗೂ ಕ್ರೀಡಾ ದಿಗ್ಗಜರ ಹೆಸರುಗಳನ್ನೇ ನಾಮಕರಣ ಮಾಡಿ: ಕಾಂಗ್ರೆಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights