ಫ್ಯಾಕ್ಟ್‌ಚೆಕ್ : ಮತ್ತೆ ಮತ್ತೆ ವೈರಲ್ ಆಗುತ್ತಿದೆ ಮಕ್ಕಳ ಕಳ್ಳರ ವಿಡಿಯೋ! ವಾಸ್ತವವೇನು ?

ಸಾಮಾಜಿಕ ಮಾಧ್ಯವವಾದ ವಾಟ್ಸಾಪ್‌ನಲ್ಲಿ ವಿಡಿಯೋವೊಂದು ಪದೇ ಪದೇ ವೈರಲ್ ಆಗುತ್ತಿದ್ದು, ಮಕ್ಕಳನ್ನು ಅಪಹರಿಸಿ ಅಂಗಾಗಳನ್ನು ಕದ್ದು, ಮಕ್ಕಳನ್ನು ಕೊಲೆ ಮಾಡಿದೆ ಎಂದು, ನಿಮ್ಮ ಸುತ್ತಮುತ್ತ ಇದೇ ರೀತಿ ಘಟನೆಗಳು ನಡೆಯಬಹುದು ಯಾವುದೇ ಅಪರಿಚಿತರನ್ನು ನಂಬಬೇಡಿ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ದುಷ್ಕರ್ಮಿಗಳು ಬೇರೆ ದೇಶದಿಂದ ನಮ್ಮ ದೇಶಕ್ಕೆ ನುಗ್ಗಿದ್ದಾರೆ, ಯಾಕೆ ರೀತಿ ಮಾಡ್ತಿದ್ದಾರೆ ಎಂದು ಯಾರಿಗೂ ಸುಳಿವು ಸಿಕ್ಕಿಲ್ಲ, ಹಾಗಾಗಿ ರಾತ್ರಿಹೊತ್ತು ಹೊರಗಡೆಯಿಂದ ಬಾಗಿಲು ಬಡಿದರೆ ತೆಗೆಯಬೇಡಿ, ನೀರು, ಊಟ ಕೇಳಿದ್ರೆ ಕೊಡಬೇಡಿ ಎಂದೆಲ್ಲಾ ಹಂಚಿಕೊಳ್ಳಲಾಗುತ್ತಿದೆ.

ಪೇಪರ್  ಆಯೋಕೆ ಬರೋರು, ಪ್ಲಾಸ್ಟಿಕ್ ಸಾಮಾನು ಮಾರೋಕೆ, ಕಡಿಮೆ ಬೆಲೆಗೆ ವಿವಿಧ ವಸ್ತಗಳನ್ನು ಮಾರೋದಕ್ಕೆ ಅಂತ ಬರ್ತಿದ್ದಾರೆ, ಹೊಸ ಮುಖ, ಹೊಸ ಭಾಷೆಯವರು ಅನುಮಾನಾಸ್ಪದವಾಗಿ ನಿಮಗೆ ಕಂಡುಬಂದರೆ, ಅಂತಹವರನ್ನು ಕಟ್ಟಿ ಕೂಡಿಹಾಕಿ ಪೊಲೀಸರಿಗೆ ದೂರು ನೀಡಿ ಎಂದು ಕೇಳಿಕೊಳ್ಳುತ್ತೇನೆ ಎಂಬು ಪೋಸ್ಟ್‌ಗಳು ಹರಿದಾಡುತ್ತಿವೆ.

ಅಲೀಪುರ, ಮೋಕಾ, ಬಳ್ಳಾರಿ, ಸಂಗನಕಲ್ಲು, ಕಕ್ಕನಬೆಳ್ಳು, ಚೆಳ್ಗುರ್ಕಿ ಭಾಗದಲ್ಲಿ ಹೆಚ್ಚು ಜನ ದುಷ್ಕರ್ಮಿಗಳು ಸಿಕ್ಕಿಬಿದ್ದಿದ್ದಾರೆ. ಇವರು ತುಂಬಾ ಅಪಾಯಕಾರಿಗಳು ಇಂತಹವರನ್ನು ಕಂಡರೆ ಎನ್‌ಕೌಂಟರ್ ಮಾಡಿ ಬಿಸಾಕಿಬಿಡಿ, ಸಾಧ್ಯವಾದರೆ ಪೊಲೀಸರಿಗೆ ಒಪ್ಪಿಸಿ ಎಂಬ ಕೊಲಾಜ್ ಮಾಡಿದ ವಿಡಿಯೋದೊಂದಿಗೆ ಆಡಿಯೋವೊಂದು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಈ ವೈರಲ್ ವಿಡಿಯೋದಲ್ಲಿ ಪ್ರಸಾರ ಮಾಡಲಾದ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಾಲ್ಕು ಬೇರೆ ಬೇರೆ ದೃಶ್ಯಗಳನ್ನು ಸೇರಿಸಿ ವಿಡಿಯೋನ್ನು ರಚಿಸಲಾಗಿದ್ದು, ಈ ದೃಶ್ಯಗಳು ನಿಜವಾಗಿಯೂ ಮಕ್ಕಳ ಅಪಹರಣಕಾರರ ಕೃತ್ಯವೇ ಅಥವಾ ಬೇರೆಯದ್ದೇ ಎಂದು ಇವುಗಳ ಹಿಂದಿರುವ ವಾಸ್ತವ ಏನೆಂದ ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ದೃಶ್ಯ-1

ಮೊದಲಿಗೆ ಮೂರು ಮೃತ ಮಕ್ಕಳನ್ನು ನೆಲದ ಮೇಲೆ ಮಲಗಿಸಿ ಅವುಗಳ ಮುಂದೆ ಅಳುತ್ತಿರುವ ದೃಶ್ಯ.

ಈ ದೃಶ್ಯಕ್ಕೂ ವೈರಲ್ ಆಗಿರುವ ದೃಶ್ಯದಲ್ಲಿರುv ಹಿನ್ನಲೆ ಧ್ವನಿಯಲ್ಲಿ ಹೇಳಲಾಗಿರುವ ಘಟನೆಗೂ ಒಂದಕ್ಕೊಂದು ಸಂಬಂಧವಿಲ್ಲ. ಯಾಕೆಂದರೆ, ಈ ದೃಶ್ಯದಲ್ಲಿ ಕಾಣುತ್ತಿರುವ ಮಕ್ಕಳು ಅಪಹರಣಕಾರರಿಂದ ಕೊಲೆಯಾಗಿದ್ದಾರೆ ಎನ್ನುವುದು ಸಂಪೂರ್ಣ ಸುಳ್ಳು. ಈ ಮಕ್ಕಳು ಜುಲೈ 16, 2022 ರಂದು ರಾಜಸ್ಥಾನದ, ನಾಗವಾರದ ನಗರ ಸಭೆ ವ್ಯಾಪ್ತಿಯಲ್ಲಿ ನೀರಿನಲ್ಲಿ ಮುಳುಗಿ (4 ಮಕ್ಕಳು)  ಸಾವನ್ನಪ್ಪಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಸಹದೇವ್ ಕಸ್ವಾನ್ ಎಂಬ ಸಾಮಾಜಿಕ ಮಾಧ್ಯಮದ ಬಳಕೆದಾರರೊಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ಇದೇ ಘಟನೆ ಬಗ್ಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಈ ಮಕ್ಕಳ ಸಾವಿಗೆ ನಾಗವಾರ ನಗರಸಭೆ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ನಾಗವಾರ ನಗರದ ಪವರ್ ಹೌಸ್ ಮುಂಭಾಗದ ಮೈದಾನದಲ್ಲಿ ಕಸ ವಿಲೇವಾರಿ ಮಾಡಲು ನಗರಸಭೆ ವತಿಯಿಂದ ಹಾಕಲಾಗಿದ್ದ ಹೊಂಡಗಳಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಇದಕ್ಕೆ ನಗರಸಭೆ ನೇರ ಹೊಣೆ ಎಂದು ಆರೋಪಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಅವರು ಮೃತ ಮಕ್ಕಳ ಮಹಿತಿಯನ್ನು ಹಂಚಿಕೊಂಡಿದ್ದು ಈ ಅಪಘಾತದಲ್ಲಿ ಮೋಹನ್‌ರಾಮ್ ಅವರ ಪುತ್ರಿ ಆರತಿ (3), ನಾಥೂರಾಂ ಅವರ ಪುತ್ರಿ ಲಿಚ್ಮಾ (3), ಪಪ್ಪುರಂ ಅವರ ಪುತ್ರ ರಾಮಲಾಲ್ (3) ಮತ್ತು ಬಾಬುಲಾಲ್ ಅವರ ಪುತ್ರ ಶಿಂಭುರಾಮ್ (4) ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೆಯೇ ಮಾಧ್ಯಮಗಳು ಇದ್ದನೆ ವರದಿಯಲ್ಲಿ ಪ್ರಕಟಿಸಿವೆ.

ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ನಂತರ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ, ಮಕ್ಕಳ ದೇಹಗಳ ಮೇಲೆ Y ಆಕಾರಾದ ಗುರುತು ಪತ್ತೆಯಾಗಿದ್ದು ಅದನ್ನೆ ಆಧಾರವಾಗಿಟ್ಟುಕೊಂಡು  ಮಕ್ಕಳನ್ನು ಅಪಹರಿಸಿ ಅಂಗಾಂಗಗಳನ್ನು ಕದ್ದು ಕೊಲೆ ಮಾಡಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ದೃಶ್ಯ-2

ಎರಡನೇ ದೃಶ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಕೆಲ ಯುವಕರು ಪಿಸು ಧ್ವನಿಯಲ್ಲಿ ಮಾತನಾಡುತ್ತಾ ಮಕ್ಕಳನ್ನು ಮರಕ್ಕೆ ಕಟ್ಟಿ ಹಾಕಿ ಹಣದ ವ್ಯವಹಾರವನ್ನು ಮಾಡುತ್ತಿರುವಂತೆ ವಿಡಿಯೋದಲ್ಲಿ ತೋರಿಸಲಾಗಿದೆ.

ಈ ವಿಡಿಯೋದಲ್ಲಿ ಕಾಣುವ ದೃಶ್ಯಗಳ್ನು ಈ ಹಿಂದೆಯೇ ನಮ್ಮ ಏನ್‌ಸುದ್ದಿ.ಕಾಂ ನಲ್ಲಿ ಫ್ಯಾಕ್ಟ್‌ಚೆಕ್ ಮಾಡುವ ಮೂಲಕ ಸತ್ಯ ಸಂಗತಿ ಏನೆಂದು ಸ್ಟೋರಿಯನ್ನು ಪ್ರಕಟಿಸಲಾಗಿತ್ತು, ಅದನ್ನು ಇಲ್ಲಿ ನೋಡಬಹುದು.

ಮೂಲ ವೀಡಿಯೊದ 1:28 ನಿಮಿಷಗಳಲ್ಲಿದ್ದು, ಈ ವೀಡಿಯೊ ಸಂಪೂರ್ಣ ಕಾಲ್ಪನಿಕವಾಗಿದೆ, ವೀಡಿಯೊದಲ್ಲಿನ ಎಲ್ಲಾ ಈವೆಂಟ್‌ಗಳನ್ನು ಸ್ಕ್ರಿಪ್ಟ್ (ನಾಟಕೀಯ) ಮಾಡಲಾಗಿದೆ ಮತ್ತು ಜಾಗೃತಿ ಉದ್ದೇಶಕ್ಕಾಗಿ ಮಾಡಲಾಗಿದೆ, ಇದು ಯಾವುದೇ ರೀತಿಯ ನೈಜ ಅಥವಾ ಪ್ರಾಣಹಾನಿಯ ಘಟನೆಯನ್ನು ಉತ್ತೇಜಿಸುವುದಿಲ್ಲ ಎಂದು ಡಿಸ್‌ಕ್ಲೈಮ್ ಮಾಡಲಾಗಿದೆ. ಈ ವಿಡಿಯೋದಲ್ಲಿರುವ ದೃಶ್ಯಗಳು ನೈಜ ಘಟನೆಯಲ್ಲ.

ದೃಶ್ಯ-3

ಮೂರನೇ ದೃಶ್ಯದಲ್ಲಿ ಪುಟ್ಟ ಮಗುವೊಂದರ ತಲೆ ಮಾತ್ರವೇ ಕಾಣಿಸುತ್ತಿದ್ದು ದೇಹದ ಭಾಗ ಸಂಪೂರ್ಣ ನಶಿಸಿರುವಂತೆ ಕಾಣುತ್ತಿದೆ.

ಈ ಮಗುವಿನ ದೇಹದ ಬಹುತೇಕ ಭಾಗಗಳನ್ನು ಪ್ರಾಣಿಗಳು ತಿಂದುಹಾಕಿರುವಂತೆ ಕಾಣುತ್ತಿದ್ದು, ಅಸ್ತಿಪಂಜರ, ಕಾಲುಗಳು ಮತ್ತ ತಲೆ ಮಾತ್ರವೇ ಇದ್ದು ಈ ಚಿತ್ರ ಸುಮಾರು 2018ರಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಅಪಹರಣದ ಕತೆಯ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ಚಿತ್ರ ಎಲ್ಲಿಯದು ಎಂದು ಮತ್ತಷ್ಟು ತನಿಖೆಯ ಮೂಲಕ ಹೆಚ್ಚಿನ ವಿವರವನ್ನು ಲೇಖನವನ್ನು ಪ್ರಸಾರ ಮಾಡಲಾಗುವುದು. ಆದರೆ ಈಗ ವೈರಲ್ ಆಗಿರುವ ವಿಡಿಯೋಗೂ ಈ ದೃಶ್ಯಕ್ಕೂ ಸಂಬಂಧವಿಲ್ಲ.

ದೃಶ್ಯ-4

ನಾಲ್ಕನೇ ದೃಶ್ಯದಲ್ಲಿ ಜೀವಂತ ವ್ಯಕ್ತಿಯ ದೇಹದಿಂದ ಚರ್ಮವನ್ನು ಸುಲಿದು, ಜಟರಕ್ಕೆ ಕೈ ಹಾಕಿ ದೇಹದ ಭಾಗಗಳನ್ನು ಹೊರತೆಗೆಯುವಂತ ಭಯಾನಕ ದೃಶ್ಯಗಳನ್ನು ಕಾಣಬಹುದು.

ಈ ದೃಶ್ಯವು ಯಾವ ಘಟನೆಯಿಂದ ತೆಗೆದುಕೊಳ್ಳಲಾಗಿದೆ ಎಂಬುದನ್ನ ಕಂಡುಹಿಡಿಯಲು ಸಾಧ್ಯವಾಗಿಲ್ಲ, ಆದರೆ ಕೆಲ ವೆಬ್‌ಸೈಟ್‌ಗಳು 5ವರ್ಷಗಳ ಹಿಂದೆಯೇ ಈ ವಿಡಿಯೋವನ್ನು ಹಂಚಿಕೊಂಡು ಮೆಕ್ಸಿಕನ್ ಪೋಲೀಸ್ ಮತ್ತು ಅವನ ಮಗನನ್ನು ಕಾರ್ಟೆಲ್ ಚಿತ್ರಹಿಂಸೆ ನೀಡಿ ಕ್ರೂರವಾಗಿ ಸಾಯಿಸಿದ್ದಾರೆ ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಯಾವ ದೃಶ್ಯಗಳು ಒಂದಕ್ಕೊಂದು ಸಂಬಂಧವಿಲ್ಲ ಮತ್ತು ಹಳೆಯ ಬೇರೆ ಬೇರೆ ಘಟನೆಯ ಹಾಗೂ ಸ್ಕ್ರಿಪ್ಟೆಡ್ ಮಾಡಿದ ವಿಡಿಯೋಗಳನ್ನು ಒಟ್ಟಿಗೆ ಸೇರಿಸಿ ಮಕ್ಕಳ ಕಳ್ಳರು ಮಕ್ಕಳನ್ನು ಅಪಹರಿಸಿ ಅಂಗಾಂಗಳನ್ನು ಕದಿಯುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights