ಫ್ಯಾಕ್ಟ್‌ಚೆಕ್: ಪರಿಶೀಲಿಸಿದ ನಂತರವೇ ಅಗತ್ಯವಿದ್ದವರಿಗೆ ಚಿಕಿತ್ಸೆಗಾಗಿ ದೇಣಿಗೆ ನೀಡಿ

ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳ ಹಲವು ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಅವರ ಚಿಕಿತ್ಸೆಗಾಗಿ ದೇಣಿಗೆ ಕೋರಿ ಪೋಸ್ಟ್‌ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದಲ್ಲಿ ಇಂತಹದೇ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಈ ಎಲ್ಲಾ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರಕರಣ 1

ಹೊಟ್ಟೆ ಊದಿಕೊಂಡ ಮಗುವಿನ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಮಗು ಕ್ಯಾನ್ಸರ್‌ನಿಂದ ಬಳಲುತ್ತಿದೆ ಎಂಬ ಹೇಳಿಕೆಯೊಂದಿಗೆ ಮಗುವಿನ ಚಿಕಿತ್ಸೆಗಾಗಿ (ದೇಣಿಗೆ) ಸಹಾಯವನ್ನು ಕೋರುತ್ತ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಈ ಸುದ್ದಿಯ ಸತ್ಯಾಸತ್ಯತೆ ಏಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಟೊವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಕೆಟ್ಟೊ ಮೂಲಕ ನಿಧಿಸಂಗ್ರಹಣೆ ಮಾಡುವ ವೆಬ್‌ಸೈಟ್‌ ಲಭ್ಯವಾಗಿದೆ. ಈ ನಿಧಿಸಂಗ್ರಹ ಅಭಿಯಾನವು ಈಗಾಗಲೇ ಒಂದು ವರ್ಷದ ಹಿಂದೆಯೇ ಕೊನೆಗೊಂಡಿದೆ ಎಂದು ವೆಬ್‌ಸೈಟ್ ತೋರಿಸುತ್ತದೆ.

ಕೆಟ್ಟೋ ವೆಬ್‌ಸೈಟ್‌ನ ಮಾಹಿತಿ ಪ್ರಕಾರ, ವೈರಲ್ ಫೋಟೊಗಳು ಆಗಸ್ಟ್ 2020 ರಲ್ಲಿ ಜನಿಸಿದ ಜಿಯಾನ್ ಎಂಬ ಮಗುವಿನದ್ದು. 2021 ರಲ್ಲಿ, ಮಗುವಿಗೆ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿತ್ತು. ಮಗುವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಗಾಗಿ  ಸುಮಾರು ₹ 20 ಲಕ್ಷ ವೆಚ್ಚವಾಗುತ್ತದೆ ಎಂದು ವೈದ್ಯರು ಅವರ ಪೋಷಕರಿಗೆ ತಿಳಿಸಿದರು. ಈ ದೊಡ್ಡ ಮೊತ್ತವನ್ನು ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ, ಹಾಗಾಗಿ ಮಗುವಿನ ಪೋಷಕರು ಕೆಟ್ಟೋನಲ್ಲಿ ನಿಧಿಸಂಗ್ರಹಣೆಯ ಅಭಿಯಾನವನ್ನು ಪ್ರಾರಂಭಿಸಿದರು. 1661 ಜನರ ಉದಾತ್ತ ಸಹಾಯದಿಂದ  ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಮತ್ತು ಮಗು ಜಿಯಾನ್ ಈಗ ಆರೋಗ್ಯಕರ ಜೀವನವನ್ನು ನಡೆಸುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಗು ಜಿಯಾನ್‌ನ ಆರೋಗ್ಯ ಸಮಸ್ಯೆಯಿಂದಾಗಿ ಪೋಷಕರು 2021ರಲ್ಲಿ ಚಿಕಿತ್ಸೆಗಾಗಿ ನಿಧಿಸಂಗ್ರಹದ ಅಭಿಯಾನಕ್ಕೆ ಕರೆ ನೀಡಿದ್ದರು.  ಇದು ಒಂದು ವರ್ಷದ ಹಿಂದೆ ಕೆಟ್ಟೋನಲ್ಲಿ ಅಂತ್ಯಗೊಂಡಿರುವ ಅಭಿಯಾನವಾಗಿದ್ದು, ಮಗುವಿಗೆ ಶಸ್ತ್ರ ಚಿಕಿತ್ಸೆಯನ್ನು ಪೂರ್ಣಗೊಳಿಸಿ ಮಗು ಈಗ ಆರೋಗ್ಯವಾಗಿದೆ. ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಹಳೆಯ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ವಂಚನೆಯ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಮನವಿ ಮಾಡುತ್ತಿದ್ದಾರೆ. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಪ್ರಕರಣ 2

ಮಗುವಿನ ಮುಖದ ಒಂದು ಭಾಗವು ಊದಿಕೊಂಡಿರುವ ಪೋಟೋಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಈ ಮಗು ಕ್ಯಾನ್ಸರ್‌ನಿಂದ ಬಳಲುತ್ತಿದೆ ಎಂಬ ಹೇಳಿಕೆಯೊಂದಿಗೆ ಮಗುವಿನ ಚಿಕಿತ್ಸೆಗಾಗಿ ದೇಣಿಗೆ ನೀಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಮಗು ಬಾಂಗ್ಲಾದೇಶದ 5 ವರ್ಷದ ತಜ್ರಿನ್ ಆಗಿದ್ದು,  2020 ರಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕೆಟ್ಟೋ ಮೂಲಕ ಆನ್‌ಲೈನ್ ದೇಣಿಗೆಯ ಸಹಾಯದಿಂದ, ಆಕೆಗೆ ಅಗತ್ಯವಿರುವ ಚಿಕಿತ್ಸೆಗಾಗಿ ₹ 20 ಲಕ್ಷ ಮೊತ್ತ ಸಿಕ್ಕಿತು. ಆಕೆ ಈಗ ಕ್ಯಾನ್ಸರ್ ನಿಂದ ಗುಣಮುಖಳಾಗಿ ಆರೋಗ್ಯವಾಗಿದ್ದಾಳೆ. ಆದರೆ ಇಂದಿಗೂ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈಗ ಈ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಮೋಸದ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ದಾನಿಗಳನ್ನು ಕೇಳುತ್ತಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಾಟ್ಸಾಪ್, ಫೇಸ್‌ಬುಕ್ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಹತ್ತು ಹಲವು ಪೋಸ್ಟ್‌ ಮತ್ತು ಸಂದೇಶಗಳು ಕಂಡುಬರುತ್ತಿರುತ್ತವೆ. ಅವುಗಳಲ್ಲಿ ನೈಜ ಸಮಸ್ಯೆಗಳಿಗೆ ತುತ್ತಾದ ಜನರೂ ಇರುತ್ತಾರೆ. ಅವರಿಗೆ ದೇಣಿಗೆ ನೀಡುವುದು ಉತ್ತಮ ನಡೆ. ಆದರೆ ಕೆಲವರು ಬೇರೆಯವರ ಫೋಟೊ ಬಳಸಿಕೊಂಡು ವಂಚಿಸಿರುತ್ತಿರುವು ಸರಿಯಲ್ಲ. ಇದರಿಂದ ನಿಜವಾಗಿಯೂ ತೊಂದರೆಯಲ್ಲಿರುವವರಿಗೂ ಸಹಾಯ ಸಿಗದೇ ಹೋಗುವ ಅಪಾಯವಿದೆ.

ನಮ್ಮ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯವನ್ನು ಸಂಪೂರ್ಣ ಉಚಿತವಾಗಿ ನೀಡಿದಾಗ ಇಂತಹ ಸಮಸ್ಯೆಗಳು ಉದ್ಭವವಾಗುವುದಿಲ್ಲ. ದೇಶದ ಪ್ರತಿಯೊಬ್ಬರಿಗೂ ಗುಣಮಟ್ಟದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ನೀಡಲು ಸಾಧ್ಯವಿದೆ. ಅದಕ್ಕೆ ಆಳುವವರು ಮನಸ್ಸು ಮಾಡಬೇಕಿದೆ.

ಒಟ್ಟಾರೆಯಾಗಿ ಮೇಲಿನ ಸಂದೇಶಗಳು ವಂಚಿಸುವ ಉದೇಶಗಳನ್ನು ಹೊಂದಿದ್ದು ಅವುಗಳನ್ನು ಪರಿಶೀಲಿಸದೆ ದೇಣಿಗೆ ನೀಡಿದರೆ ನಿಮ್ಮ ಹಣ ವಂಚಕರ ಪಾಲಾಗುವುದಂತು ಸತ್ಯ.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆ ತಪ್ಪಾಗಿದೆ. ನೀವು ಮುಂದಕ್ಕೂ ಹಣ ನೀಡಿ, ಆದರೆ ಪರಿಶೀಲಿಸಿ ಅಗತ್ಯವಿದ್ದವರಿಗೆ ನೀಡಿ ಎಂಬುದು ನಮ್ಮ ಕಾಳಜಿ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಕಲಿ ರುದ್ರಾಕ್ಷಿ ಮಣಿಯ ಬಗ್ಗೆ ಇರಲಿ ಎಚ್ಚರ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಪರಿಶೀಲಿಸಿದ ನಂತರವೇ ಅಗತ್ಯವಿದ್ದವರಿಗೆ ಚಿಕಿತ್ಸೆಗಾಗಿ ದೇಣಿಗೆ ನೀಡಿ

  • October 24, 2022 at 11:43 pm
    Permalink

    ಜನ ಸಾಮಾನ್ಯರುಪರಿಶೀಲಿಸುವುದು ಹೇಗೆ ಎಂದು ತಿಳಿಸಿ. 9108600445

    Reply

Leave a Reply

Your email address will not be published.

Verified by MonsterInsights