ಫ್ಯಾಕ್ಟ್‌ಚೆಕ್: ಚೀನಾದ ಮ್ಯೂಸಿಯಂನಲ್ಲಿರುವ ವಸ್ತುಗಳನ್ನು ಮಹಾಭಾರತದ ರಥ ಎಂದು ತಪ್ಪಾಗಿ ಹಂಚಿಕೆ
ವಿದೇಶದಲ್ಲಿ ನಡೆದ ಉತ್ಖನನದ ವೇಳೆ ಮಹಾಭಾರತದ ರಥ ಪತ್ತೆಯಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಾಗಿದ್ದರೆ ನಿಜವಾಗಿಯೂ ರಥ ಪತ್ತೆಯಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
‘ಸರ್ವಜನ ಸುಖಿನೋ ಭವಂತೂ’ ಎಂಬ ಫೇಸ್‌ಬುಕ್ ಅಕೌಂಟ್ ಕೂಡಾ ಇವುಗಳನ್ನು ಪೋಸ್ಟ್ ಮಾಡಿ, ಮಹಾಭಾರತದ ರಥ ಪತ್ತೆಯಾಗಿದೆ ಎಂದು ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿವೆ.
ಫ್ಯಾಕ್ಟ್‌ಚೆಕ್:
ಆದರೆ ನಿಜಕ್ಕೂ ಇವು ವಿದೇಶದಲ್ಲಿ ಪತ್ತೆಯಾದ ಮಹಾಭಾರತ ಕಾಲದ ರಥವೆ?
ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಖನನದ ವೇಳೆ ಮಹಾಭಾರತದ ರಥ ಪತ್ತೆಯಾಗಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ವಿಡಿಯೋ ದೃಶ್ಯಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಚೀನಾದ ಆನ್ ಯಾಂಗ್ ನಗರದ ಸಮೀಪವಿರುವ ‘‘ಯಿನ್ ಕ್ಸು” ಮ್ಯೂಸಿಯಂನದ್ದು ಎಂದು ನಾವು ಕಂಡುಕೊಂಡಿದ್ದೇವೆ. ಇದರ ಕುರಿತು ಹೆಚ್ಚಿನ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಚೀನೀ ಸರ್ಕಾರದ ಅಧಿಕೃತ ವೆಬ್‌ಸೈಟ್ ಪ್ರಕಾರ, “ಯಿನ್ ಕ್ಸು” ಪ್ರದೇಶವು ಚೀನಾದ ಅತ್ಯಂತ ಹಳೆಯ ಪುರಾತನ ತಾಣಗಳಲ್ಲಿ ಒಂದಾಗಿದೆ. 19ನೇ ಶತಮಾನದಿಂದಲೂ ಇಲ್ಲಿ ಉತ್ಖನನ ನಡೆಸಲಾಗುತ್ತಿದೆ. ಸುಮಾರು 3300 ವರ್ಷಗಳಷ್ಟು ಹಳೆಯದಾದ ವಸ್ತುಗಳು, ಮೂಳೆಗಳು, ಆಭರಣಗಳು ಮತ್ತು ರಥಗಳನ್ನು ಇಲ್ಲಿನ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು. ಇದು ‘ಶಾಂಗ್(ಇನ್)’ ರಾಜವಂಶದ ಪಳೆಯುಳಿಕೆಗಳಾಗಿದ್ದು, ಅವರ ಆಳ್ವಿಕೆ ಕ್ರಿಸ್ತಪೂರ್ವ 16 ರಿಂದ 11 ನೇ ಶತಮಾನದ ಮಧ್ಯದವರೆಗೆ ಇತ್ತು.
ಈ ತಾಣವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ಇಲ್ಲಿನ ಪುರಾತನ ಸಮಾಧಿಗಳಲ್ಲಿ ಮಾನವ ಮೂಳೆಗಳ ಜೊತೆಗೆ ರಥದ ಚಕ್ರಗಳು, ವಿವಿಧ ಆಭರಣಗಳು ಮತ್ತು ಪಾತ್ರೆಗಳು ಸಹ ಕಂಡುಬಂದಿವೆ.ಈ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾದ ರಥಗಳ ಹೆಚ್ಚಿನ ಫೋಟೋಗಳನ್ನು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ವೀಡಿಯೊದಲ್ಲಿನ ದೃಶ್ಯಗಳು ಚೀನಾದ ಆನ್ ಯಾಂಗ್ ನಗರದ ಸಮೀಪವಿರುವ “ಯಿನ್ ಕ್ಸು” ವಸ್ತುಸಂಗ್ರಹಾಲಯದ್ದಾಗಿದೆ. ಇಲ್ಲಿನ ಪುರಾತನ ಸಮಾಧಿಗಳಲ್ಲಿ ಮಾನವ ಮೂಳೆಗಳ ಜೊತೆಗೆ ರಥದ ಚಕ್ರಗಳು, ವಿವಿಧ ಆಭರಣಗಳು ಮತ್ತು ಪಾತ್ರೆಗಳು ಸಹ ಕಂಡುಬಂದಿವೆ. ಇವುಗಳು 3300 ವರ್ಷಗಳಷ್ಟು ಹಳೆಯದಾದ ಶಾಂಗ್ ರಾಜವಂಶಕ್ಕೆ ಸೇರಿದವು ಎಂದು ಯುನೆಸ್ಕೋ ಗುರುತಿಸಿದೆ. ಜೊತೆಗೆ ಈ ವಸ್ತುಸಂಗ್ರಹಾಲಯದಲ್ಲಿ ಅನೇಕ ಪುರಾತನ ರಥಗಳನ್ನು ಸಹ ಕಾಣಬಹುದು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
ಕೃಪೆ: ಫ್ಯಾಕ್ಟ್‌ಲಿ
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮಹಿಳೆಯರ ಹತ್ಯೆ ತೋರಿಸುವ ಈ CCTV ದೃಶ್ಯಾವಳಿಗಳು ನಿಜವೇ?