ಫ್ಯಾಕ್ಟ್‌ಚೆಕ್: ಅರುಣಾಚಲ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಮೋದಿಯೇ ಬರಬೇಕಾಯಿತೆ?

ಭಾರತದ ಸ್ವಾತಂತ್ರ್ಯದ ನಂತರ ಅರುಣಾಚಲ ಪ್ರದೇಶದಲ್ಲಿ ನಿರ್ಮಿಸಲಾದ ಮೊದಲ ವಿಮಾನ ನಿಲ್ದಾಣದ ಚಿತ್ರ ಎಂದು ಹೇಳುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೂ ಮೋದಿಯೇ ಬರಬೇಕಾಯಿತು ನೋಡಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಇದುವರೆಗೆ ಅರಣಾಚಲ ಪ್ರದೇಶದಲ್ಲಿ ವಿಮಾನ ನಿಲ್ದಾಣವೇ ಇರಲಿಲ್ಲವೆ ?

ಅಂದರೆ ಸ್ವಾತಂತ್ರ ಬಂದು 75 ವರ್ಷದಲ್ಲಿ ಅರುಣಾಚಲ ಪ್ರದೇಶದಲ್ಲಿ ಒಂದೇ ಒಂದು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‍ನಲ್ಲಿ ಸರ್ಚ್ ಮಾಡಿದಾಗ, ಅದೇ ಫೋಟೋವನ್ನು ‘NDTV’ ಸುದ್ದಿ ವೆಬ್‌ಸೈಟ್ 18 ನವೆಂಬರ್ 2022 ರಂದು ಪ್ರಕಟಿಸಿದೆ. ‘NDTV’ ಇದನ್ನು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಡೋನಿ ಪೋಲೋ ವಿಮಾನ ನಿಲ್ದಾಣದ ಚಿತ್ರ ಎಂದು ವರದಿ ಮಾಡಿದೆ. ಇಟಾನಗರ. ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾದ ಡೋನಿ ಪೊಲೊ ವಿಮಾನ ನಿಲ್ದಾಣವನ್ನು 19 ನವೆಂಬರ್ 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಸರ್ಕಾರದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಪಾಸಿಘಾಟ್, ತೇಜು ಮತ್ತು ಝೀರೋ ನಂತರ ಅರುಣಾಚಲ ಪ್ರದೇಶದ ನಾಲ್ಕನೇ ವಾಣಿಜ್ಯ ವಿಮಾನ ನಿಲ್ದಾಣವಾಗಿದೆ. ಝೀರೋ ವಿಮಾನ ನಿಲ್ದಾಣವು ಪ್ರಸ್ತುತ ಕಾರ್ಯನಿರ್ವಹಿಸದ ಕಾರಣ ಇದು ಮೂರನೇ ಕಾರ್ಯಾಚರಣೆಯ ವಿಮಾನ ನಿಲ್ದಾಣವಾಗಿದೆ.

19 ನವೆಂಬರ್ 2022 ರಂದು ಪ್ರಧಾನಮಂತ್ರಿ ಕಚೇರಿಯಿಂದ ಬಿಡುಗಡೆಯಾದ ಪತ್ರಿಕಾ ಪ್ರಕಟಣೆಯ ಪ್ರಕಾರ, ಡೋನಿ ಪೋಲೋ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, “ಉತ್ತರ ಈಶಾನ್ಯ ಪ್ರದೇಶದಲ್ಲಿ ಸ್ವಾತಂತ್ರ್ಯ ನಂತರ ಕೇವಲ 9 ವಿಮಾನ ನಿಲ್ದಾಣಗಳಿದ್ದವು. ಆದರೆ ನಾವು ಅಧಿಕಾರಕ್ಕೆ ಬಂದ ನಂತರ ಹೊಸದಾಗಿ 7 ವಿಮಾನ ನಿಲ್ದಾಣಗಳನ್ನು ಸ್ಥಾಪಿಸಿದ್ದೇವೆ. ಈಗ ಒಟ್ಟು 16 ವಿಮಾನ ನಿಲ್ದಾಣಗಳಿವೆ” ಎಂದು ಹೇಳಿದ್ದಾರೆ. ಆದರೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ವೆಬ್‌ಸೈಟ್ ಒದಗಿಸಿದ ಮಾಹಿತಿಯ ಪ್ರಕಾರ, ಅರುಣಾಚಲ ಪ್ರದೇಶದ ದೋನಿ ಪೊಲೊ ವಿಮಾನ ನಿಲ್ದಾಣವನ್ನು ಹೊರತುಪಡಿಸಿ ಪ್ರಸ್ತುತ ಪಾಸಿಘಾಟ್ ಮತ್ತು ತೇಜು ವಿಮಾನ ನಿಲ್ದಾಣಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. AAI ವೆಬ್‌ಸೈಟ್‌ನಲ್ಲಿ ಅರುಣಾಚಲ ಪ್ರದೇಶದ  ಝಿರೋ ವಿಮಾನ ನಿಲ್ದಾಣವು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲಾಗಿದೆ.

21 ಮೇ 2018 ರಂದು, ಅರುಣಾಚಲ ಪ್ರದೇಶ ಸಿಎಂ ಪ್ರೇಮ್ ಖಂಡು ವಿಮಾನ ನಿಲ್ದಾಣ ಉದ್ಘಾಟನೆಯ ಚಿತ್ರಗಳ ಕೊಲಾಜ್ ಅನ್ನು ಟ್ವೀಟ್ ಮಾಡಿದ್ದಾರೆ, “ಗುವಹಾಟಿಯ ಗೋಪಿನಾಥ್ ಬೊರ್ಡೊಲೋಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಸಿಘಾಟ್‌ಗೆ ಮೊದಲ ವಾಣಿಜ್ಯ ಸ್ಥಿರ ವಿಂಗ್ ವಿಮಾನ @airindiain ಏರ್ ಅಲೈಯನ್ಸ್ ಗುವಾಹಟಿಗೆ ಹಾರಿದೆ” ಎಂದು ಬರೆದಿದ್ದಾರೆ. ಹಲವಾರು ಸುದ್ದಿ ವೆಬ್‌ಸೈಟ್‌ಗಳು ಅರುಣಾಚಲ ಪ್ರದೇಶಕ್ಕೆ ಮೊದಲ ವಾಣಿಜ್ಯ ವಿಮಾನವು 21 ಮೇ 2018 ರಂದು ಪಾಸಿಘಾಟ್ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ವರದಿ ಮಾಡುವ ಲೇಖನಗಳನ್ನು ಪ್ರಕಟಿಸಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಸುದ್ದಿ ವರದಿಗಳ ಪ್ರಕಾರ ಈ ಮೊದಲೇ ಅಲ್ಲಿ ವಿಮಾನ ನಿಲ್ದಾಣ ಇರುವುದು ಖಚಿತವಾಗಿದೆ.

ಆದರೆ 2018 ರಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಫ್ಯಾಕ್ಟ್‌ಚೆಕ್ ವರದಿಯಲ್ಲಿ, ಅರುಣಾಚಲ ಪ್ರದೇಶದಲ್ಲಿ ಮೊದಲ ವಾಣಿಜ್ಯ ವಿಮಾನದ ಲ್ಯಾಂಡಿಂಗ್ 1980 ರ ದಶಕದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ನಡುವಿನ ಪ್ರಾದೇಶಿಕ ಏರ್‌ಲೈನ್ ಜಂಟಿ ಉದ್ಯಮವಾದ ವಾಯುದೂತ್ 1980 ಮತ್ತು 1990 ರ ದಶಕದಲ್ಲಿ ಈಶಾನ್ಯ ಪ್ರದೇಶಗಳಿಗೆ ವಾಯು ಸಂಪರ್ಕವನ್ನು ಒದಗಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಲೇಖನವು ವರದಿ ಮಾಡಿದೆ. ಸುದ್ದಿ ವರದಿಯ ಪ್ರಕಾರ, ವಾಯುದೂತ್ ಏರ್‌ಲೈನ್ಸ್ 1980 ರ ದಶಕದಲ್ಲಿ ಪಾಸಿಘಾಟ್ ಮತ್ತು ತೇಜು ವಿಮಾನ ನಿಲ್ದಾಣಗಳನ್ನು ಒಳಗೊಂಡಂತೆ ಅರುಣಾಚಲ ಪ್ರದೇಶದ ಹಲವಾರು ಸ್ಥಳಗಳಿಗೆ  ವಾಯುಸಂಚಾರ ನಡೆಸಿದೆ. ಅಲ್ಲದೆ, 20 ಮೇ 2018 ರಂದು ‘ಟೈಮ್ಸ್ ಆಫ್ ಇಂಡಿಯಾ’ ಪ್ರಕಟಿಸಿದ ಲೇಖನದಲ್ಲಿ, ವಾಯುದೂತ್ 1990 ರಲ್ಲಿ ರಾಜ್ಯಕ್ಕೆ ತನ್ನ 19 ಆಸನಗಳ ವಿಮಾನಯಾನ ಸೇವೆಗಳನ್ನು ನಿಲ್ಲಿಸಿದ್ದರಿಂದ 28 ವರ್ಷಗಳ ನಂತರ ಅರುಣಾಚಲ ಪ್ರದೇಶದಲ್ಲಿ ವಾಣಿಜ್ಯ ವಿಮಾನ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ವರದಿಯಾಗಿದೆ. ಈ ಎಲ್ಲಾ ಪುರಾವೆಗಳಿಂದ, ಡೋನಿ ಪೋಲೋ ವಿಮಾನ ನಿಲ್ದಾಣವು ಭಾರತದ ಸ್ವಾತಂತ್ರ್ಯದ ನಂತರ ಅರುಣಾಚಲ ಪ್ರದೇಶದಲ್ಲಿ ನಿರ್ಮಿಸಲಾದ ಮೊದಲ ವಿಮಾನ ನಿಲ್ದಾಣವಲ್ಲ ಎಂದು ತೀರ್ಮಾನಿಸಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, 19 ನವೆಂಬರ್ 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉದ್ಘಾಟಿಸಿದ ಡೋನಿ ಪೋಲೋ ವಿಮಾನ ನಿಲ್ದಾಣದ ದೃಶ್ಯವನ್ನು ಫೋಟೋ ತೋರಿಸುತ್ತದೆ. ಇದು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ನಿರ್ಮಿಸಲಾದ ಮೊದಲ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವಾಗಿದೆ. ಸರ್ಕಾರದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಪಾಸಿಘಾಟ್, ತೇಜು ಮತ್ತು ಝೀರೋ ವಿಮಾನ ನಿಲ್ದಾಣಗಳ ನಂತರ ಡೋನಿ ಪೋಲೋ ವಿಮಾನ ನಿಲ್ದಾಣವು ಅರುಣಾಚಲ ಪ್ರದೇಶದ ನಾಲ್ಕನೇ ವಾಣಿಜ್ಯ ವಿಮಾನ ನಿಲ್ದಾಣವಾಗಿದೆ. ಝೀರೋ ವಿಮಾನ ನಿಲ್ದಾಣವು ಪ್ರಸ್ತುತ ಕಾರ್ಯನಿರ್ವಹಿಸದ ಕಾರಣ ಇದು ಮೂರನೇ ಕಾರ್ಯಾಚರಣೆಯ ವಿಮಾನ ನಿಲ್ದಾಣವಾಗಿದೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ಸುದ್ದಿ ವರದಿಯ ಪ್ರಕಾರ, ಅರುಣಾಚಲ ಪ್ರದೇಶವು 1980 ರ ದಶಕದಲ್ಲಿ ಭಾರತದ ವಾಯುಯಾನ ನಕ್ಷೆಯನ್ನು ಸೇರಿತು. ಅಂದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲೇ ಈ ರಾಜ್ಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು. ಆದ್ದರಿಂದ, ಪೋಸ್ಟ್ ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ಮತ್ತು ಸ್ಮೃತಿ ಇರಾನಿ ಅವರ ಎಡಿಟ್ ಮಾಡಿದ ಫೋಟೊ ವೈರಲ್


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights