ಫ್ಯಾಕ್ಟ್‌ಚೆಕ್: ನ್ಯಾಯಾಧೀಶರಿಂದ ವಕೀಲೆ ಮೇಲೆ ಹಲ್ಲೆ ಎಂದು ವಿಡಿಯೋ ವೈರಲ್! ವಾಸ್ತವವೇನು?

ಮಹಾರಾಷ್ಟ್ರ ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಾಧೀಶರೊಬ್ಬರು, ಮಹಿಳಾ ವಕೀಲರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೈರಲ್ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು,  “ಮಹಾರಾಷ್ಟ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ವಿರುದ್ಧ ವಕೀಲೆ ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಹೇಳಬೇಕಾದವರೇ ಹಿಂಗೆ ಪರಸ್ಪರ ಬಡಿದಾಡಿಕೊಂಡರೆ ಇನ್ನು ಸಾರ್ವಜನಿಕರ ಗತಿ ಏನು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಹಾಗಿದ್ದರೆ ಈ ಘಟನೆ ನಡೆದಿದರುವುದು ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ನ್ಯಾಯಾಧೀಶೆ ಮತ್ತು ವಕೀಲೆಯ ನಡುವೆ ನಡೆದಿರುವ ಜಟಾಪಟಿ ದೃಶ್ಯಗಳನ್ನು ಪರಿಶೀಲಿಸಲು ಕೀವರ್ಡ್‌ಗಳನ್ನು ಬಳಸಿಕೊಂಡು ಸರ್ಚ್ ಮಾಡಿದಾಗ, ಮಹಾರಾಷ್ಟ್ರದಲ್ಲಿ ಅಂತಹ ಘಟನೆಗಳು ನಡೆದಿರುವ ಯಾವುದೇ ವರದಿಗಳು ಲಭ್ಯವಾಗಿಲ್ಲ.

ಇದೇ ವಿಡಿಯೋವನ್ನು ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಟೈಮ್ಸ್‌ ಆಫ್ ಇಂಡಿಯಾ ಮಾಡಿದ ವರದಿ ಲಭ್ಯವಾಗಿದೆ. 29 ಅಕ್ಟೋಬರ್ 2022ರಂದು ವಿಡಿಯೋ ಕುರಿತಾದ ವರದಿಯಲ್ಲಿ,  ಉತ್ತರ ಪ್ರದೇಶದ ನ್ಯಾಯಾಲಯದ ಆವರಣದಲ್ಲಿ ವಕೀಲೆಯರ ನಡುವೆ ಮಾರಾಮಾರಿ ನಡೆದಿದೆ ಎಂದು ವರದಿಯಾಗಿದೆ.

ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಸರ್ಚ್ ಮಾಡಿದಾಗ, ಬಾರ್‌ & ಬೇಂಚ್ ನ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಂಡಿರುವ ಪೋಸ್ಟ್‌ ಲಭ್ಯವಾಗಿದೆ.  ಕಾಸ್ಗಂಜ್ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ದಂಪತಿ ವಿರುದ್ಧ ವಾದ ಮಂಡಿಸುತ್ತಿದ್ದ ಇಬ್ಬರು ಮಹಿಳಾ ವಕೀಲರು ವಾಗ್ವಾದಕ್ಕಿಳಿದಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ದೈನಿಕ್ ಭಾಸ್ಕರ್ ವರದಿಯ ಪ್ರಕಾರ, ಇಬ್ಬರು ವಕೀಲರನ್ನು ಕವಿತಾ ಸಕ್ಸೇನಾ ಮತ್ತು ಸುನೀತಾ ಕೌಶಿಕ್ ಎಂದು ಗುರುತಿಸಲಾಗಿದೆ, ಅವರು  ಅಲಿಗಢ ಮತ್ತು ಕಸ್ಗಂಜ್‌ನಿಂದ ಬಂದಿದ್ದಾರೆ. ಇಬ್ಬರೂ ತಮ್ಮ ಕಕ್ಷಿದಾರರಾದ ಪಾರುಲ್ ಸಕ್ಸೇನಾ ಮತ್ತು ಅವರ ಪತಿ ರಾಹುಲ್ ಅವರ ವಿವಾದದ ಕುರಿತು ಒಂದೇ ದಿನದಲ್ಲಿ ವಿಚಾರಣೆಯನ್ನು ನಿಗದಿಪಡಿಸಲು ಬಂದಿದ್ದರು. ಇಬ್ಬರು ಮಹಿಳಾ ವಕೀಲರು ಪರಸ್ಪರರ ನಡುವೆ ಸಣ್ಣ ವಾದ ಜಗಳಕ್ಕೆ ಕಾರವಾಯಿತು ಎಂದು ವರದಿಗಳು ಹೇಳಿವೆ.

ANI ಮಾಡಿರುವ ವರದಿಯ ಪ್ರಕಾರ, ಅಕ್ಟೋಬರ್ 29, 2022 ರಂದು “ಕಾಸ್‌ಗಂಜ್ ಕೌಟುಂಬಿಕ ನ್ಯಾಯಾಲಯದಲ್ಲಿ ಇಬ್ಬರು ಅಡ್ವೊಕೇಟ್‌ಗಳ ನಡುವೆ ಸಣ್ಣ ವಾದ ನಡೆದಿದೆ, ನಂತರ ಪರಸ್ಪರ ಇಬ್ಬರು ಜಗಳವಾಡಿದ್ದಾರೆ. ನ್ಯಾಯಾಲಯದ ಆವರಣದಲ್ಲಿ ಹಲ್ಲೆ ಮತ್ತು ಪ್ರತಿ ಹಲ್ಲೆ ನಡೆದಿರುವುದರಿಂದ ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.” ಉತ್ತರ ಪ್ರದೇಶದ ಕಾಸ್‌ಗಂಜ್ ಕೌಟುಂಬಿಕ ನ್ಯಾಯಾಲಯದಲ್ಲಿ ಎದುರಾಳಿ ಕಕ್ಷಿದಾರರ ಪರವಾಗಿ ಹಾಜರಾದ ಮಹಿಳಾ ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು  ಲೋಕಸತ್ತಾ ಮತ್ತು ನವಭಾರತ್ ಟೈಮ್ಸ್‌ನ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿರುವ ಕೌಟುಂಬಿಕ ನ್ಯಾಯಾಲಯದ ಹೊರಗೆ ಇಬ್ಬರು ವಕೀಲರ ನಡುವೆ ನಡೆದ ಘರ್ಷಣೆಯ ವೈರಲ್ ವೀಡಿಯೊವನ್ನು “ಮಹಾರಾಷ್ಟ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಿಂದ ಮಕೀಲೆ ಮೇಲೆ ಹಲ್ಲೆ” ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ಕೃಪೆ: ನ್ಯೂಸ್‌ಚೆಕ್ಕರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಭಾಷಣ ಮಾಡುವಾಗ ಮೂಕಾಭಿನಯ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights