ಫ್ಯಾಕ್ಟ್‌ಚೆಕ್ : ಮಹಿಳೆಯೊಬ್ಬರು ನದಿಯಂಚಿನಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳನ್ನು ಜಲ ದೇವತೆಯ ಪವಾಡ ಎಂದು ತಪ್ಪಾಗಿ ಹಂಚಿಕೆ

ಜಬಲ್‌ಪುರದ ನರ್ಮದಾ ನದಿಯ ನೀರಿನಲ್ಲಿ ಒಬ್ಬ ಮಹಿಳೆ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ನೋಡಿ ಜನರು ನದಿ ತೀರದತ್ತ ಜಮಾಯಿಸಿದರು. ನದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ನರ್ಮದಾ ಮಾತೆ ಎಂದು ಅಥವಾ ದೇವತೆ ಎಂದು ಪೂಜಿಸತೊಡಗಿದರು.

ತನ್ನ ಬಟ್ಟೆ ಒದ್ದೆಯಾಗದಂತೆ ನರ್ಮದಾ ನದಿಯಲ್ಲಿ ಮುಳುಗದಂತೆ ನಡೆಯುತ್ತಾ ಬಂದಿದ್ದಾರೆ ಎಂದರೆ ಆಕೆ ನರ್ಮದಾ ಮಾತೆ ದೇವಿಯೆಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ನದಿಯಲ್ಲಿ ಮುಳುಗದಂತೆ ನಡೆದುಕೊಂಡು ಹೋಗಿದ್ದು ದೇವತೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ಅನ್ನು ಪರಿಶೀಲಿಸಿದಾಗ, 8 ಏಪ್ರಿಲ್ 2023 ರಂದು ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಈ ಘಟನೆ ಸಂಭವಿಸಿದೆ, ಮಹಿಳೆಯೊಬ್ಬರು ನೀರಿನ ಮೇಲೆ ನಡೆದುಕೊಂಡು ಹೋಗುತ್ತಿರುವ ವೈರಲ್ ವೀಡಿಯೊ ಜನಸಮೂಹವನ್ನು ಆಕರ್ಷಿಸಿತು. ಆಕೆಯನ್ನು ‘ನರ್ಮದಾ ದೇವಿ’ ಎಂದು ನಂಬಿ ಆಶೀರ್ವಾದ ಪಡೆಯಲು ಜನರು ಜಮಾಯಿಸಿದರು. ಜನರು ಡ್ರಮ್ ಬಾರಿಸುತ್ತಾ ಆಕೆಯ ಸುತ್ತಲೂ ನೆರೆದಿದ್ದರಿಂದ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು, ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸರ ವಿಚಾರಣೆಯಲ್ಲಿ ಜ್ಯೋತಿ ರಘುವಂಶಿ ಎಂಬ ಮಹಿಳೆ ತಾನು ನರ್ಮದಾ ನದಿಯ ನೀರಿನ ಮೇಲೆ ನಡೆದಿದ್ದನ್ನು ಅಲ್ಲಗಳೆದಿದ್ದಾರೆ. ತಾನು ನರ್ಮದಾಪುರಂ ನಿವಾಸಿಯಾಗಿದ್ದು, 10 ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಈಕೆ 10 ತಿಂಗಳಿಂದ ಮನೆ ಬಿಟ್ಟಿದ್ದಾರೆ. ನರ್ಮದಾ ನದಿ ತೀರದಲ್ಲೇ ಈಕೆ ನೆಲೆಸಿದ್ದಾರೆ. ಜೊತೆಗೆ ತಾನೇನೂ ದೇವತೆ ಅಲ್ಲ ಅನ್ನೋದನ್ನೂ ಮಹಿಳೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ನಾನು ಯಾರ ಬಳಿಯಲ್ಲೂ ತನಗೆ ದೈವೀ ಶಕ್ತಿ ಇದೆ ಎಂದು ಹೇಳಿಕೊಂಡಿಲ್ಲ ಎಂದಿದ್ದಾರೆ.

ನರ್ಮದಾ ನದಿಯ ನೀರಿನ ಮಟ್ಟವು ಬದಲಾಗುತ್ತಿದೆ ಮತ್ತು ಬೇಸಿಗೆಯಲ್ಲಿ ಕೆಲವು ಸ್ಥಳಗಳಲ್ಲಿ ಇದು ತುಂಬಾ ಕಡಿಮೆಯಾಗಿದೆ. ಹೀಗಾಗಿ ನೀರಿಲ್ಲದೆ ಜಾಗದಲ್ಲಿ ನಡೆದರೂ ನೀರಿನಲ್ಲಿ ನಡೆದಂತೆ ಕಂಡುಬರುತ್ತದೆ ಎಂದು ಹಲವರು ಹೇಳಿದ್ದಾರೆ. ಜ್ಯೋತಿ ನರ್ಮದಾ ನದಿ ತೀರದಲ್ಲೇ ವಾಸಿಸುತ್ತಿರುವ ಕಾರಣ ಅವರಿಗೆ, ನದಿಯ ಆಳ, ಅಗಲ, ನದಿ ಹರಿವಿನ ಸಂಪೂರ್ಣ ಮಾಹಿತಿ ಇದೆ. ನದಿ ನೀರು ಎಲ್ಲಿ ನೆಲ ಮಟ್ಟದಲ್ಲಿ ಹರಿಯುತ್ತದೆ ಅನ್ನೋದು ಮಹಿಳೆಗೆ ತುಂಬಾ ಚನ್ನಾಗಿ ಗೊತ್ತಿದೆ. ಈ ರೀತಿ ನೆಲ ಮಟ್ಟದಲ್ಲಿ ನೀರು ಹರಿಯುವ ಪ್ರದೇಶದಲ್ಲಿ ಈ ಮಹಿಳೆ ನಡೆದಾಡುತ್ತಾರೆ. ಅಂದರೆ ಈಕೆ ನೀರಿನ ಮೇಲೆ ನಡೆಯೋದಿಲ್ಲ. ನದಿಯ ತಳಭಾಗ ನೆಲ ಮಟ್ಟದಲ್ಲೇ ಇರುವ ಕಡೆ ಮಾತ್ರ ನಡೆದಾಡುತ್ತಾಳೆ. ದೂರದಿಂದ ನೋಡಿದರೆ ನದಿ ಮಧ್ಯದಲ್ಲೇ ನಡೆದಾಡಿದಂತೆ ಕಂಡು ಬರುತ್ತದೆ. ಈ ರೀತಿ ಮಹಿಳೆ ನಡೆಯೋದನ್ನು ನೋಡಿದ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋವನ್ನು ತಪ್ಪಾಗಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಾನು ನರ್ಮದಾ ನದಿ ನೀರಿನ ಆಳ ಇರುವ ಭಾಗಗಳತ್ತ ಹೊಗೋದೇ ಇಲ್ಲ. ನೀರು ನೆಲ ಮಟ್ಟದಲ್ಲಿ ಹರಿಯುವ ಕಡೆ ಮಾತ್ರ ನಡೆಯುತ್ತೇನೆ. ನದಿ ಒಳಗೆ ನಾನು ಇಳಿಯೋದೇ ಇಲ್ಲ ಎಂದು ಮಹಿಳೆ ಹೇಳುತ್ತಾರೆ. ಇದೀಗ ಪೊಲೀಸರು ಈ ಪ್ರಕರಣದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಕಳೆದ 10 ತಿಂಗಳಿನಿಂದ ಮನೆ ಬಿಟ್ಟಿದ್ದ ಮಹಿಳೆಯನ್ನು ಕುಟುಂಬಸ್ಥರ ವಶಕ್ಕೆ ಒಪ್ಪಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಜ್ಯೋತಿ ರಘುವಂಶಿ ಎಂಬ ಮಹಿಳೆ ತಾನು ನರ್ಮದಾ ನದಿಯ ನೀರಿನ ಮೇಲೆ ನಡೆದಿದ್ದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನರ್ಮದಾ ಮಾತೆ, ಜಲ ದೇವತೆಯ ಪವಾಡ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಮಾವಿನ ಹಣ್ಣು ತಿಂದು ತಕ್ಷಣವೇ ಕೂಲ್ ಡ್ರಿಂಕ್ಸ್‌ ಕುಡಿದರೆ ಸಾವು ಸಂಭವಿಸುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights