ಕೃಷಿ ಮಸೂದೆ ವಿರೋಧಿಸಿ ಪಂಜಾಬ್‌ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀನಾಮೆ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿಗಳನ್ನು ವಿರೋಧಿಸಿ ಪಂಜಾಬ್‌ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಲ್ವಿಂದರ್ ಸಿಂಗ್ ಕಾಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಷ್ಟ್ರವ್ಯಾಪಿ ತೀವ್ರ ಟೀಕೆಗೆ ಗುರಿಯಾಗಿರುವ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ಬಿಜೆಪಿಯಲ್ಲಿ ಯಾರೂ ಸಿದ್ಧರಿಲ್ಲ, ಜೊತೆಗೆ ಪಕ್ಷದ ಹಿರಿಯ ನಾಯಕರು ಪಂಜಾಬ್ ಪರ ಮನೋಭಾವವನ್ನು ಹೊಂದಿಲ್ಲ ಎಂದು ಮಾಲ್ವಿಂದರ್ ಸಿಂಗ್ ಕಾಂಗ್ ಹೇಳಿದ್ದಾರೆ.

“ಸುಗ್ರೀವಾಜ್ಞೆಗಳನ್ನು ಅಂಗೀಕರಿಸಿದಾಗ ನಾನು ರೈತರ ಪ್ರತಿಭಟನೆಯ ವಿಷಯವನ್ನು ಎತ್ತಿದ್ದೇನೆ. ಪಕ್ಷದ ಪ್ರಮುಖ ಸಮಿತಿಯ ಸದಸ್ಯನಾಗಿ, ಪ್ರತಿ ಸಭೆಯಲ್ಲೂ ನಾನು ಕೃಷಿ ಮಸೂದೆಗಳ ಬಗ್ಗೆ ಮಾತಾಡುವ ಪ್ರಯತ್ನ ಮಾಡಿದ್ದೇನೆ. ಆದರೆ ಪಕ್ಷದಲ್ಲಿ ನನ್ನನ್ನು ದೂಷಿಸಲಾಯಿತು” ಎಂದಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ಕೃಷಿ ನೀತಿ ರೈತ ವಿರೋಧಿಯಾಗಿದೆ ಎಂದು ಸಚಿವ ಸ್ಥಾನಕ್ಕೆ ಕೇಂದ್ರ ಸಚಿವೆ ರಾಜೀನಾಮೆ!

“ಕೃಷಿ ಮಸೂದೆಗಳ ಬಗ್ಗೆ ಮಾತಾಡಿದ್ದಕ್ಕಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ನನ್ನನ್ನು ಪಾಕಿಸ್ತಾನಿ ಎಂದು ಕರೆದರು. ಅವರ ಭಾಷಾಪ್ರಯೋಗದ ವಿರುದ್ಧ ನಾನು ಪ್ರತಿಭಟಿಸಿದಾಗ ಅವರು ಕ್ಷಮೆಯಾಚಿಸಬೇಕಾಯಿತು. ರೈತರ ಪರವಾಗಿ ಮಾತನಾಡುವವರ ಬಗ್ಗೆ ಬಿಜೆಪಿ ಈ ರೀತಿಯ ಮನೋಭಾವವನ್ನು ಹೊಂದಿದೆ ”ಎಂದು ಕಾಂಗ್ ಹೇಳಿದ್ದಾರೆ.

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಂಗ್, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಬಂದವರು. ಕೆಲವೇ ವರ್ಷಗಳಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ್ದರು. ಪಂಜಾಬ್‌ನಲ್ಲಿ ಬಿಜೆಪಿ ಹೊಂದಿದ್ದ ಬೆರಳೆಣಿಕೆಯಷ್ಟು ಸಿಖ್ ನಾಯಕರಲ್ಲಿ ಅವರು ಕೂಡ ಒಬ್ಬರು.

“ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಪಕ್ಷದ ಪ್ರಮುಖ ಗುಂಪಿನ ಸದಸ್ಯರಾಗಿ, ಪಕ್ಷದ ವೇದಿಕೆಯಲ್ಲಿ ಪ್ರತಿಭಟನಾ ನಿರತ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕ ಸಂಘಟನೆಗಳನ್ನು ಬೆಂಬಲಿಸಿ ನಾನು ಧ್ವನಿ ಎತ್ತಿದೆ. ರೈತರ ಆಂದೋಲನವನ್ನು ಬೆಂಬಲಿಸುವ ಸಲುವಾಗಿ ನಾನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ, ”ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೃಷಿ ಮಸೂದೆ ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹರ್ಸಿಮ್ರತ್ ಕೌರ್ ಬಂಧನ!

ಪಕ್ಷದ ರಾಜ್ಯಾಧ್ಯಕ್ಷ ಅಶ್ವನಿ ಶರ್ಮಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, “ಕೇಂದ್ರ ಸರ್ಕಾರವು ಅಂಗೀಕರಿಸಿದ ಹೊಸ ಕಾಯಿದೆಗಳ ವಿರುದ್ಧ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕ ಸಂಘಟನೆಗಳು ಪ್ರಜಾಸತ್ತಾತ್ಮಕವಾಗಿ ಮತ್ತು ಸರಿಯಾಗಿ ಪ್ರತಿಭಟಿಸುತ್ತಿವೆ” ಎಂದು ಹೇಳಿದ್ದಾರೆ.

ಕಾಂಗ್ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಅಶ್ವನಿ ಶರ್ಮಾ, ತಮ್ಮ ರಾಜಕೀಯ ಮಾರ್ಗವನ್ನು ಆಯ್ಕೆ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದ್ದಾರೆ. “ಆದರೆ ಅವರ ಹಕ್ಕುಗಳಿಗೆ ಸಂಬಂಧಿಸಿದಂತೆ, ಎಲ್ಲಾ ವೇದಿಕೆಗಳಲ್ಲಿ ಧ್ವನಿ ಎತ್ತಬಹುದಾದ ಏಕೈಕ ಪಕ್ಷ ಬಿಜೆಪಿ. ಆದರೆ ಪಕ್ಷವು ಎಲ್ಲಾ ಧ್ವನಿಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಲ್ಲ” ಎಂದಿದ್ದಾರೆ.

ಹೊಸ ಕಾನೂನುಗಳು ರೈತರ ಪರವಾಗಿವೆ ಎಂದು ಮನವರಿಕೆ ಮಾಡಿಕೊಡಲು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಪಂಜಾಬ್‌ನಲ್ಲಿ ಮಾತುಕತೆ ನಡೆಸಲು ತನ್ನ ಹಲವಾರು ಮಂತ್ರಿಗಳನ್ನು ನಿಯೋಜಿಸಿರುವ ಸಮಯದಲ್ಲಿ ಕಾಂಗ್ ರಾಜೀನಾಮೆ ನೀಡಿದ್ದಾರೆ.


ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಎಸ್‌ವೈ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸುರ್ಜೇವಾಲ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights