FACT CHECK | ಬಾಂಗ್ಲಾದೇಶದಲ್ಲಿ ಹಿಂದೂ ಕ್ರಿಕೆಟಿಗನ ಮನೆಗೆ ಬೆಂಕಿ ಹಚ್ಚಲಾಗಿದೆಯೇ? ಈ ಸ್ಟೋರಿ ಓದಿ

ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಪ್ರತಿಭಟನೆ, ಗಲಾಟೆಗಳ ನಡುವೆಯೇ ಪ್ರಧಾನಿ ಶೇಖ್ ಹಸೀನಾ ಅವರು ತರಾತುರಿಯಲ್ಲಿ ರಾಜೀನಾಮೆ ನೀಡಿ ದೇಶ ತೊರೆದು ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಬಂದಿದ್ದಾರೆ. ಸಾವಿರಾರು ಪ್ರತಿಭಟನಾಕಾರರು ಅವನ ಅರಮನೆಗೆ ನುಗ್ಗಿ, ಬಾಗಿಲುಗಳನ್ನು ಮುರಿದು ಎಲ್ಲವನ್ನೂ ನಾಶಪಡಿಸಿದ್ದಾರೆ. ಇದರ ಮಧ್ಯೆ, ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿಂದೂ ಕ್ರಿಕೆಟಿಗ ಲಿಟ್ಟನ್ ದಾಸ್ ಅವರ ಮನೆ ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಲಿಟ್ಟನ್ ದಾಸ್ ಹಿಂದೂ ಎಂಬ ಕಾರಣಕ್ಕೆ ಪ್ರತಿಭಟನಾಕಾರರು ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ನಮೋ ಮಂಜು ಎಂಬ ಫೇಸ್​ಬುಕ್ ಬಳಕೆದಾರರು ಆಗಸ್ಟ್ 5, 2024 ರಂದು ಲಿಟ್ಟನ್ ದಾಸ್ ಅವರ ಫೋಟೋ ಹಂಚಿಕೊಂಡು, ‘ಬಾಂಗ್ಲಾ ದೇಶದ ಹಿಂದೂ ಕ್ರಿಕೆಟ್ ಆಟಗಾರ ಲಿಟ್ಟನ್ ದಾಸ್​ನ ಮನೆ ಗಲಭೆಯಲ್ಲಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಸರ್ವ ಧರ್ಮ ಶಾಂತಿಯ ತೋಟದ ಸೌಹಾರ್ದತೆಯ ಹೂಗಳ ಸುವಾಸನೆ ದೇಶಾದ್ಯಂತ ಹರಡುತ್ತಿದೆ…!!’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ರಾಮ್ ಗುಪ್ತಾ ಎಂಬ ಎಕ್ಸ್ ಬಳಕೆದಾರರು ಮನೆ ಹೊತ್ತಿ ಉರಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ‘ಇವರು ಲಿಟನ್ ದಾಸ್, ಬಾಂಗ್ಲಾದೇಶದ ಕ್ರಿಕೆಟಿಗ. ಅವರ ಮನೆಗೆ ಇಸ್ಲಾಮಿಗಳು ಬೆಂಕಿ ಹಚ್ಚಿದ್ದಾರೆ. ಬಾಂಗ್ಲಾದೇಶಿ ಹಿಂದೂಗಳಿಗೆ ಬೆದರಿಕೆ ಇದೆ. ಭಾರತ ಸರ್ಕಾರ ಅವರಿಗೆ ಆಶ್ರಯ ನೀಡಬೇಕು’ ಎಂದು ಪೋಸ್ಟ್ ಮಾಡಿದ್ದಾರೆ. ಉರಿಯುತ್ತಿರುವ ಮನೆಯ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಹೊಂದಿರುವ ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಾಗಾದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿಂದೂ ಕ್ರಿಕೆಟಿಗ ಲಿಟ್ಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಆಗುತ್ತಿರುವ ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ತೆಗೆದು ಗೂಗಲ್‍ನಲ್ಲಿ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ. 2024 ರ ಆಗಸ್ಟ್ 5 ರಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಇದೇ ರೀತಿಯ ಫೋಟೋ ಲಭ್ಯವಾಗಿದೆ: “ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಜಾ ಅವರ ಮನೆಗೆ ಪ್ರತಿಭಟನಾಕಾರರು ಬಾಂಗ್ಲಾದೇಶದಲ್ಲಿ ಬೆಂಕಿ ಹಚ್ಚಿದ್ದಾರೆ.” ಎಂದು ಇದರಲ್ಲಿ ಬರೆಯಲಾಗಿದೆ.

ಕೀವರ್ಡ್ ಸರ್ಚ್ ನಡೆಸಿದಾಗ ಕನ್ನಡ ಪ್ರಭ ವರದಿ ಲಭ್ಯವಾಗಿದೆ. ಇದರಲ್ಲಿ ‘ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಕ್ರಿಕೆಟಿಗನ ಮನೆಗೆ ದಾಳಿ ಮಾಡಿ ಬೆಂಕಿ ಹಚ್ಚಿದ್ದು ನಿಜ, ಆದರೆ ಈ ಮನೆ ಲಿಟನ್ ದಾಸ್ ಅವರದ್ದಲ್ಲ. ಈ ಮನೆ ಪ್ರಸ್ತುತ ಶೇಖ್ ಹಸೀನಾ ಅವರ ಪಕ್ಷದ ಅವಾಮಿ ಲೀಗ್‌ನ ಸಂಸದರಾಗಿರುವ ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಾಜಾಗೆ ಸೇರಿದೆ. ಬಾಂಗ್ಲಾದೇಶದ ಯುವಕರಲ್ಲಿ ಮುರ್ತಾಜಾ ಏಕೆ ತಮ್ಮೊಂದಿಗೆ ನಿಲ್ಲುತ್ತಿಲ್ಲ ಎಂಬ ಅಸಮಾಧಾನವಿತ್ತು. ಹೀಗಾಗಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.’ ಎಂದು ಸ್ಪಷ್ಟವಾಗಿ ಬರೆಯಲಾಗಿದೆ.

ವೈರಲ್ ಚಿತ್ರದಲ್ಲಿ ಹಾಗೂ ವೀಡಿಯೊದಲ್ಲಿ ಕಾಣಿಸಿಕೊಂಡ ಮನೆ ಮೊರ್ತಜಾಗೆ ಸೇರಿದೆಯೇ ಎಂದು ಖಚಿತಪಡಿಸಲು, ನಾವು ಮಾರ್ಚ್ 12, 2018 ರಂದು ಪೋಸ್ಟ್ ಮಾಡಿದ ‘ಮಶ್ರಫೆ ಬಿನ್ ಮೊರ್ತಜಾ ಹೌಸ್ ನರೈಲ್’ ಶೀರ್ಷಿಕೆಯ ವೀಡಿಯೊಗೆ ಯೂಟ್ಯೂಬ್​ನಲ್ಲಿ ಕೀವರ್ಡ್ ಹುಡುಕಾಟವನ್ನು ಮಾಡಿದ್ದೇವೆ.

ನಾವು ಗೂಗಲ್ ಮ್ಯಾಪ್​ನಲ್ಲಿ ಕೂಡ ಮನೆಯನ್ನು ಗುರುತಿಸಿದ್ದು, ವೈರಲ್ ವೀಡಿಯೊಕ್ಕೂ ಈ ಮನೆಗು ಸರಿಯಾಗಿ ಹೋಲಿಕೆಯಾಗುತ್ತಿದೆ. ಯೂಟ್ಯೂಬ್ ವೀಡಿಯೊದಲ್ಲಿ, 0:18-ನಿಮಿಷದ ನಂತರ, ಅವರ ಮನೆಯನ್ನು ಮುಂಭಾಗದ ಚಿತ್ರಣ ನೋಡಬಹುದು, ಇದು ವೈರಲ್ ಚಿತ್ರದಲ್ಲಿರುವ ದೃಶ್ಯಗಳು ಮತ್ತು ಗೂಗಲ್ ಮ್ಯಾಪ್​ನಲ್ಲಿ ಕಂಡುಬರುವ ಚಿತ್ರಕ್ಕೆ ಹೊಂದಿಕೆಯಾಗುತ್ತದೆ. ಈ ಯೂಟ್ಯೂಬ್‌ನಲ್ಲಿರುವ ವಿಡಿಯೋ ಆರು ವರ್ಷಗಳ ಹಿಂದಿನದ್ದು ಹಾಗಾಗಿ ಪ್ರಸ್ತುತ ಮನೆಯ ಗೇಟ್‌ನ ಮೇಲಿನ ಕಮಾನು ಸೇರಿದಂತೆ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಈ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಗೇಟ್‌ನ ಪಕ್ಕದಲ್ಲಿರುವ ಕ್ರಿಕೆಟಿಗನ ಮ್ಯೂರಲ್ ಅನ್ನು ಎಲ್ಲಾ ದೃಶ್ಯಗಳಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಜಾ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿರುವ ವಿಡಿಯೋವನ್ನು ಕ್ರಿಕೆಟಿಗ ಲಿಟ್ಟನ್ ದಾಸ್ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು  Ensuddi.com  ವಾಟ್ಸಾಪ್  ನಂ 9108969301 ಗೆ  ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ನೀಡಲಿಲ್ಲವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights