ಫ್ಯಾಕ್ಟ್‌ಚೆಕ್: ‘ಲಯನ್ ಮ್ಯಾನ್’ ಶಿಲ್ಪವನ್ನು, ನರಸಿಂಹ ಶಿಲ್ಪ ಎಂದು ತಪ್ಪಾಗಿ ಹಂಚಿಕೆ

ಜರ್ಮನಿಯಲ್ಲಿ ಕಂಡುಬರುವ 35,000 ರಿಂದ 40,000 ವರ್ಷಗಳಷ್ಟು ಹಳೆಯದಾದ ಭಗವಾನ್ ನರಸಿಂಹ ಶಿಲ್ಪದ ದೃಶ್ಯಗಳು ಎಂದು ಹೇಳುವ ಮೂಲಕ ಕೊಲಾಜ್ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಸ್ಟ್‌ನಲ್ಲಿ ಎರಡು ವಿಭಿನ್ನ ಪೋಟೋಗಳನ್ನು ಹಂಚಿಕೊಂಡಿದ್ದು, ಫೋಟೊಗಳ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಚಿತ್ರ-1:

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ‘ವರ್ಲ್ಡ್ ಆರ್ಕಿಯಾಲಜಿ’ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಈ ಲೇಖನವು ಜರ್ಮನಿಯ ‘ಮ್ಯೂಸಿಯಂ ಉಲ್ಮ್’ ನಲ್ಲಿ ಪ್ರದರ್ಶಿಸಲಾದ ‘ಲಯನ್ ಮ್ಯಾನ್’ ಶಿಲ್ಪದ ಚಿತ್ರ ಎಂದು ವರದಿ ಮಾಡಿದೆ. ಈ ಶಿಲ್ಪವು 1939 ರಲ್ಲಿ ಹೊಹ್ಲೆನ್‌ಸ್ಟೈನ್-ಸ್ಟಾಡೆಲ್ ಗುಹೆಯೊಳಗೆ ನೂರಾರು ತುಣುಕುಗಳಾಗಿ ಪತ್ತೆಯಾದ ಒಂದು ನಿಗೂಢವಾದ ದಂತದ ಪ್ರತಿಮೆ ಎಂದು ಉಲ್ಲೇಖಿಸಲಾಗಿದೆ. ‘ಡಾನ್ಸ್ ಮ್ಯಾಪ್ಸ್’ ಪ್ರಕಟಿಸಿದ ಲೇಖನದ ಪ್ರಕಾರ, ಭೂವಿಜ್ಞಾನಿ ಒಟ್ಟೊ ವೋಲ್ಜಿಂಗ್ ಅವರು ಕೆತ್ತನೆಯ ಈ ನೂರಾರು ತುಣುಕುಗಳನ್ನು ಕಂಡುಕೊಂಡಿದ್ದಾರೆ. ಆದರೆ ಎರಡನೆಯ ಮಹಾಯುದ್ಧದ ನಂತರ ದಂತದ ಶಿಲ್ಪಗಳ ಈ ಉತ್ಖನನಗಳನ್ನು ನಿಲ್ಲಿಸಲ್ಲಾಗಿತ್ತು.  30 ವರ್ಷಗಳ ನಂತರ, ಈ ದಂತದ ತುಣುಕುಗಳ ‘ಲಯನ್ ಮ್ಯಾನ್’ ಶಿಲ್ಪವನ್ನು ಪುನಃ ರಚಿಸಲಾಯಿತು.

‘ಮ್ಯೂಸಿಯಂ ಉಲ್ಮ್’ನಲ್ಲಿ ಪ್ರದರ್ಶಿಸಲಾದ ‘ಲಯನ್ ಮ್ಯಾನ್’ ಶಿಲ್ಪದ ಇತಿಹಾಸವನ್ನು ವಿವರಿಸುವ ಲೇಖನವನ್ನು ‘ದಿ ಬ್ರಿಟಿಷ್ ಮ್ಯೂಸಿಯಂ ಬ್ಲಾಗ್’ ಪ್ರಕಟಿಸಿದೆ. ಈ ‘ಲಯನ್ ಮ್ಯಾನ್’ ಶಿಲ್ಪವನ್ನು 2017 ರಲ್ಲಿ ನಡೆದ “ಲಿವಿಂಗ್ ವಿಥ್ ಗಾಡ್ಸ್ ಅಟ್ ದಿ ಬ್ರಿಟಿಷ್ ಮ್ಯೂಸಿಯಂ” ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು. ‘ಮ್ಯೂಸಿಯಂ ಉಲ್ಮ್’ ಈ ‘ಲಯನ್ ಮ್ಯಾನ್’ ಶಿಲ್ಪದ ಬಹು ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ  ಕಾಣಬಹುದು. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರಗಳು ಜರ್ಮನಿಯಲ್ಲಿರುವ ‘ಸಿಂಹ ಮನುಷ್ಯ’ ಶಿಲ್ಪವನ್ನು ತೋರಿಸುತ್ತವೆ, ಭಗವಾನ್ ನರಸಿಂಹ ಶಿಲ್ಪವಲ್ಲ ಎಂದು ಸ್ಪಷ್ಟವಾಗಿದೆ.


ಚಿತ್ರ-2:

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್‌ ಮಾಡಿದಾಗ, ‘ಅಲಾಮಿ’ ವೆಬ್‌ಸೈಟ್‌ನಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಫೋಟೋದ ವಿವರಣೆಯಲ್ಲಿ, ‘ಕರ್ನಾಟಕದ ಬಾದಾಮಿಯಲ್ಲಿರುವ ಬಾದಾಮಿ ಗುಹೆ ದೇವಾಲಯಗಳ ಗುಹೆ 3 ರಲ್ಲಿನ ನರಸಿಂಹ’ ವಿಗ್ರಹ ಎಂದು ಹೇಳುತ್ತದೆ. ಈ ನರಸಿಂಹ ಶಿಲ್ಪವನ್ನು ಕರ್ನಾಟಕದ ಬಾದಾಮಿ ಗುಹಾಂತರ ದೇವಾಲಯಗಳಲ್ಲಿ ನಿರ್ಮಿಸಲಾಗಿದೆ. ‘ಫ್ಲಿಕ್ಕರ್’ ಬಳಕೆದಾರರು ಇದೇ ರೀತಿಯ ವಿವರಣೆಯೊಂದಿಗೆ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘Amazing Places on our Planet’ ಯೂಟ್ಯೂಬ್ ಚಾನೆಲ್ ಕರ್ನಾಟಕದ ಬಾದಾಮಿ ದೇವಸ್ಥಾನದ ಗುಹೆಗಳ ಕುರಿತು ವೀಡಿಯೊವನ್ನು ಪ್ರಕಟಿಸಿದೆ. ಈ ವೀಡಿಯೋದಲ್ಲಿ ನರಸಿಂಹ ದೇವರ ದೃಶ್ಯವನ್ನು ನಾವು ನೋಡಬಹುದು. ಬಾದಾಮಿ ದೇವಾಲಯದ ಗುಹೆಗಳೊಳಗಿನ ಶಿಲ್ಪಗಳನ್ನು 6 ಮತ್ತು 7 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಜರ್ಮನಿಯಲ್ಲಿರುವ 40 ಸಾವಿರ ವರ್ಷಗಳಷ್ಟು ಹಳೆಯದಾದ ‘ಸಿಂಹ ಮನುಷ್ಯ’ ಶಿಲ್ಪವನ್ನು ನರಸಿಂಹ ದೇವರ ಶಿಲ್ಪ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

(07 ಅಕ್ಟೋಬರ್ 2022):

ಇದೇ ರೀತಿಯ ಪ್ರತಿಪಾದನೆ ಹೊಂದಿರುವ ಮತ್ತೊಂದು ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಎಡಭಾಗದಲ್ಲಿರುವ ಕಪ್ಪು ಶಿಲ್ಪದ ಫೋಟೋ ಜರ್ಮನಿಯಿಂದಲ್ಲ. ಇದು ಪಶ್ಚಿಮ ಬಂಗಾಳದ (ಭಾರತ) ಶ್ರೀ ಧಾಮ್ ಮಾಯಾಪುರದಲ್ಲಿರುವ ‘ಲಾರ್ಡ್ ನರಸಿಂಹದೇವ’ ಪ್ರತಿಮೆಯಾಗಿದೆ. ಒಂದೇ ಪ್ರತಿಮೆಯ ಹೆಚ್ಚಿನ ದೃಶ್ಯಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಬಲಭಾಗದಲ್ಲಿರುವ ಶಿಲ್ಪದ ಫೋಟೋಗಳ ಬಗ್ಗೆ ಈಗಾಗಲೇ ಮೇಲಿನ ವಿವರಣೆಯಲ್ಲಿ ತಿಳಿಸಲಾಗಿದೆ. ಫೋಟೋಗಳು ‘ಸಿಂಹ ಮನುಷ್ಯ’ ಶಿಲ್ಪವನ್ನು ತೋರಿಸುತ್ತವೆ. ಇದು 40,000 ವರ್ಷಗಳಷ್ಟು ಹಳೆಯದು ಎಂಬುದು ನಿಜವಾದರೂ, ಯಾವುದೇ ಪ್ರತಿಷ್ಠಿತ ಮತ್ತು ವಿಶ್ವಾಸಾರ್ಹ ಸಂಸ್ಥೆಗಳು ಇದನ್ನು ನರಸಿಂಹ ದೇವರ ಪ್ರತಿಮೆ ಎಂದು ಉಲ್ಲೇಖಿಸಿಲ್ಲ. ‘ಸಿಂಹದ ಮನುಷ್ಯ’ ಪಾತ್ರಕ್ಕೆ ನಂಬಲರ್ಹವಾದ ಹಿನ್ನೆಲೆ ಅಥವಾ ಪುರಾಣ ಕತೆಗಳ ಉಲ್ಲೇಖವೂ ಇಲ್ಲ. ಪ್ರತಿಮೆಯನ್ನು ಅರ್ಧ ಮನುಷ್ಯ ಮತ್ತು ಅರ್ಧ ಸಿಂಹ ಎಂದು ಪರಿಗಣಿಸಲಾಗಿದೆ, ಆದ್ದರಿಂದ ಇದನ್ನು ‘ಸಿಂಹ ಮನುಷ್ಯ’ ಎಂದು ಕರೆಯಲಾಗುತ್ತದೆ. ಹಾಗಾಗಿ ಫೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಲ್ಲಿ ಇದ್ದದ್ದು ಪಾಕಿಸ್ತಾನದ ಬಾವುಟವಲ್ಲ! ಮತ್ಯಾವುದು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights