ಹಂಪನಾ ವಿರುದ್ಧ ಕ್ರಮ, BJP ಸರ್ಕಾರದ್ದು ಕೀಚಕ ನಡೆ ಪ್ರತೀಕ; ಡಿಕೆ ಶಿವಕುಮಾರ್

ಜನಪರ ಧ್ವನಿಯೆತ್ತಿದ ಖ್ಯಾತ ಸಾಹಿತಿ, ಸಂಶೋಧಕ ಹಂ.ಪ. ನಾಗರಾಜಯ್ಯ ವಿರುದ್ಧ ಪೊಲೀಸ್ ಕ್ರಮ ಕೈಗೊಂಡ ರಾಜ್ಯ ಬಿಜೆಪಿ ಸರಕಾರದ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಕೇಂದ್ರ ಸರಕಾರವನ್ನು ಟೀಕಿಸಿದರು ಎಂಬ ಏಕೈಕ ಕಾರಣಕ್ಕಾಗಿ ಹಂಪನಾ ಅವರನ್ನು ಮಂಡ್ಯ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಹಾಗೂ ಕೀಚಕ ನಡೆಯ ಪ್ರತೀಕ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಹಂಪನಾ ಅವರು ಈ ನಾಡು ಕಂಡ ಶ್ರೇಷ್ಠ ಭಾಷಾ ವಿಜ್ಞಾನಿ, ಸಂಶೋಧಕ ಹಾಗೂ ಎಲ್ಲಕ್ಕೂ ಮಿಗಿಲಾಗಿ ಚಿಂತಕ. ಅಂತಹವರ ಧ್ವನಿ ಅಡಗಿಸಲು ರಾಜ್ಯ ಸರಕಾರ ಮುಂದಾದದ್ದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.

ತಮ್ಮ ವಿರುದ್ಧ ಧ್ವನಿ ಎತ್ತುವ ರಾಜಕೀಯ ವಿರೋಧಿಗಳ ವಿರುದ್ಧ ಹಗೆತನ ಸಾಧಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದೀಗ ಸಾಹಿತಿಗಳನ್ನೂ ಆ ಪಟ್ಟಿಗೆ ಸೇರಿಸಿಕೊಂಡಿರುವುದು ದುರಂತದ ಸಂಗತಿ ಎಂದು ಅವರು ಛೇಡಿಸಿದ್ದಾರೆ.

ಅದು ಯಾವುದೇ ಸರಕಾರವಿರಲಿ, ಅದರ ಜನವಿರೋಧಿ ನಡೆಯನ್ನು ಟೀಕಿಸುವ, ತಿದ್ದುವ, ತೀಡುವ ಹಕ್ಕನ್ನು ಈ ದೇಶದ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನ ಕಲ್ಪಿಸಿದೆ. ಆದರೆ ಸರಕಾರಗಳು ತಮಗಿರುವ ಅಧಿಕಾರ ದುರ್ಬಳಕೆ ಮಾಡಿಕೊಂಡು, ಪೊಲೀಸ್ ಬಲದ ಮೂಲಕ ಸಾಹಿತಿಗಳು, ಬುದ್ಧಿಜೀವಿಗಳು, ಪ್ರಜ್ಙಾವಂತರ ಧ್ವನಿ ಅಡಗಿಸಲು ಹೊರಟಿರುವುದು ಖಂಡನೀಯ. ಸರಕಾರ ತನ್ನ ಈ ವಕ್ರನಡೆಯನ್ನು ತಿದ್ದಿಕೊಳ್ಳದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ತಮಿಳು, ಬಂಗಾಳ ಚುನಾವಣೆಯ ನಂತರ ಕಾಂಗ್ರೆಸ್‌ಗೆ ಚುನಾಯಿತ ಅಧ್ಯಕ್ಷರು ಖಚಿತ: ವೇಣುಗೋಪಾಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights