ಫ್ಯಾಕ್ಟ್‌ಚೆಕ್: ವಾಹನ ಸವಾರರು 12 ಗಂಟೆಗಳ ಒಳಗೆ ವಾಪಸ್ಸಾದರೆ ಟೋಲ್ ಶುಲ್ಕ ಫ್ರಿ ಎಂಬುದು ನಿಜವೇ?

ಟೋಲ್ ಬೂತ್‌ ಪ್ರವೇಶಿಸಿದ ವಾಹನ ಸವಾರರು 12 ಗಂಟೆಗಳ ಒಳಗೆ ಹಿಂತಿರುಗಿದರೆ ಟೋಲ್ ಶುಲ್ಕ ವಿನಾಯಿತಿ ಇರುತ್ತದೆ ಎಂದು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. “ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಜನರು 12 ಗಂಟೆಗಳ ಒಳಗೆ ಹಿಂದಿರುಗಿದರೆ ಯಾವುದೇ ಟೋಲ್ ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲ” ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಟೋಲ್ ಶುಲ್ಕ ಕುರಿತಾದ ಸುದ್ದಿ ನಿಜವೇ ಎಂದು ಪರಿಶೀಲಿಸಿದಾಗ PIB ಫ್ಯಾಕ್ಟ್‌ಚೆಕ್ ಟ್ವೀಟ್ ಲಭ್ಯವಾಗಿದ್ದು, ಸರ್ಕಾರ ಅಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ ಮತ್ತು ಶುಲ್ಕ ವಿನಾಯಿತಿ ಕುರಿತು ವೈರಲ್ ಆಗಿರುವ ಪೋಸ್ಟ್‌ಗಳು ಸುಳ್ಳು ಎಂದು ಸ್ಪಷ್ಟಪಡಿಸಿದೆ.

PIB ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ PIB ಫ್ಯಾಕ್ಟ್ ಚೆಕ್ ತಂಡ ಟ್ವೀಟ್ ಮಾಡಿದ್ದು, “ಒಮ್ಮೆ ಟೋಲ್ ಶುಲ್ಕ ಪಾವತಿ ಮಾಡಿ 12 ಗಂಟೆಗಳ ಒಳಗೆ ಹಿಂತಿರುಗಲು ಸಾಧ್ಯವಾದರೆ ನೀವು ಹಿಂತಿರುಗುವ ಪ್ರಯಾಣದಲ್ಲಿ ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆದೇಶ ನೀಡಿದ್ದಾರೆ ಎನ್ನುವ ಸುದ್ದಿ ಸಂಪೂರ್ಣ ಸುಳ್ಳು” ಎಂದು ತಿಳಿಸಿದೆ.

2008 ರ ಡಿಸೆಂಬರ್ 5 ರಂದು ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಯಮಗಳು, 2008 ಅನ್ನು ಸರ್ಕಾರವು ಸೂಚಿಸಿದೆ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ನಿಯಮಗಳು ಎಲ್ಲಾ ಸಾರ್ವಜನಿಕ ಅನುದಾನಿತ ಯೋಜನೆಗಳು ಮತ್ತು ಖಾಸಗಿ ಬಳಕೆದಾರರ ಶುಲ್ಕವನ್ನು ನಿರ್ಧರಿಸಲು ಅನ್ವಯಿಸುತ್ತವೆ.

ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾದ ವೈಯಕ್ತಿಕ ಅಧಿಸೂಚನೆಯ ಪ್ರಕಾರ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯಲ್ಲಿ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಯಮಗಳು 2008 ರ ಪ್ರಕಾರ, ಬಳಕೆದಾರರ ಶುಲ್ಕ ಪ್ಲಾಜಾದ ನಿರ್ದಿಷ್ಟ ಪ್ರದೇಶದೊಳಗೆ ವಾಸಿಸುವ ವ್ಯಕ್ತಿಗಳಿಗೆ ವಿನಾಯಿತಿಗಾಗಿ ಯಾವುದೇ ಅವಕಾಶವಿಲ್ಲ.

ಅನಿಯಮಿತ ಪ್ರವಾಸಗಳಿಗಾಗಿ 2022-23 ಹಣಕಾಸು ವರ್ಷಕ್ಕೆ ತಿಂಗಳಿಗೆ 315 ರುಪಾಯಿ ದರದಲ್ಲಿ ಮಾಸಿಕ ಪಾಸ್‌ನ ಸೌಲಭ್ಯವು ಶುಲ್ಕ ಪ್ಲಾಜಾವನ್ನು ವಾಣಿಜ್ಯೇತರ ಉದ್ದೇಶಗಳಿಗಾಗಿ ನೋಂದಾಯಿಸಲಾದ ವಾಹನವನ್ನು ಹೊಂದಿರುವ ಮತ್ತು ಟೋಲ್‌ನಿಂದ 20 ಕಿಲೋಮೀಟರ್‌ಗಳ ಒಳಗೆ ವಾಸಿಸುವ ವ್ಯಕ್ತಿಗಳಿಗೆ ಸೌಲಭ್ಯವಿದೆ.

ಕಳೆದ 2 ವರ್ಷಗಳಿಂದ ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಇಂತಹ ಸಂದೇಶಗಳು ಹರಿದಾಡುತ್ತಿರುವುದನ್ನು ಕಾಣಬಹುದು. ಕಳೆದ ವರ್ಷ ಇಂತಹದೇ ಸಂದೇಶವು ವೈರಲ್ ಆದಾಗ, ನಿತಿನ್ ಗಡ್ಕರಿ ಅವರ ಸಚಿವಾಲಯವನ್ನು ಸಂಪರ್ಕಿಸಿ ವೈರಲ್ ಸುದ್ದಿಯ ಬಗ್ಗೆ ಪರಿಶೀಲಿಸಿದಾಗ, ಅಂತಹ ಯಾವುದೇ ಆದೇಶ ಅಥವಾ ಹೇಳಿಕೆಯ ಇಲಾಖೆ ಮೂಲಕ ನೀಡಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ವಾಹನ ಸವಾರರು 12 ಗಂಟೆಗಳ ಒಳಗೆ ಹಿಂದಿರುಗಿದರೆ ಟೋಲ್ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡುವ ಕುರಿತು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (NHAI) ಅಧಿಕೃತ ಪತ್ರವಾಗಲೀ ಅಥವಾ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ  ನಿತಿನ್ ಗಡ್ಕರಿಯವರ ಯಾವುದೇ ಉಲ್ಲೇಖಿತ ಪತ್ರವಾಗಲಿ ಇಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ರಾತ್ರಿ ಇಡೀ ಮೊಬೈಲ್ ಚಾರ್ಜ್ ಹಾಕಿದರೆ ಬ್ಯಾಟರಿ ಸ್ಫೋಟಗೊಳ್ಳುವುದೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights